ಕಾಳಸಂತೆಯಲ್ಲಿ ಮಾರಾಟ: 670 ಕೆಜಿ ಪಡಿತರ ಅಕ್ಕಿ ವಶ

ಕಾಳಸಂತೆಯಲ್ಲಿ ಮಾರಾಟ: 670 ಕೆಜಿ ಪಡಿತರ ಅಕ್ಕಿ ವಶ

ಮಂಗಳೂರು: ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಸುಮಾರು 670 ಕೆಜಿ ಪಡಿತರ ಅಕ್ಕಿಯನ್ನು ಮೂಲ್ಕಿ ತಾಲೂಕು ಆಹಾರ ನಿರೀಕ್ಷಕರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಮುಲ್ಕಿ ತಾಲೂಕು ಪ್ರಭಾರ ಆಹಾರ ನಿರೀಕ್ಷಕ ಎಚ್.ಬಿ. ಮಂಜುನಾಥ್ ಅವರು ಕರ್ತವ್ಯದಲ್ಲಿದ್ದ ವೇಳೆ ದೊರೆತ ಮಾಹಿತಿಯ ಮೇರೆಗೆ ಹಳೆಯಂಗಡಿ ಆಲ್ ಅಲ್ಸ ಲೇಔಟ್ ಬಳಿಯ ಮನೆಯೊಂದಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಅಪ್ಸಾ ಎಂಬವರಿಗೆ ಸೇರಿದ ಮನೆಯ ಕೆಳ ಅಂತಸ್ತಿನ ತೆರೆದ ಕೊಠಡಿಯಲ್ಲಿ ರಿಯಾಜ್  ಎಂಬವರು ಪಡಿತರ ಅಕ್ಕಿಯನ್ನು ಸುಮಾರು 20ರಿಂದ 30 ಕೆಜಿ ಸಾಮರ್ಥ್ಯದ 26 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ, ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿಟ್ಟಿರುವುದು ಪತ್ತೆಯಾಗಿದೆ. ಅಕ್ಕಿಯನ್ನು ಪರಿಶೀಲಿಸಿದಾಗ ಅದು ಪಡಿತರ ಅಕ್ಕಿ ಎಂಬುದು ಖಚಿತವಾಗಿದೆ.

ಬಳಿಕ ಪಂಚರ ಸಮಕ್ಷಮ ಮಹಜರು ನಡೆಸಿ, ದಾಸ್ತಾನಿನಲ್ಲಿದ್ದ ಅಕ್ಕಿಯಿಂದ ಎರಡು ಮಾದರಿಗಳನ್ನು ಸಂಗ್ರಹಿಸಿ, ಒಟ್ಟು 26 ಚೀಲಗಳ ಅಕ್ಕಿಯನ್ನು ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಂಡ ಅಕ್ಕಿಯನ್ನು ಗೂಡ್ಸ್ ವಾಹನದ ಮೂಲಕ ಕೂಳೂರು ಅಕ್ಕಿ ದಾಸ್ತಾನು ಮಳಿಗೆಗೆ ಸ್ಥಳಾಂತರಿಸಲಾಗಿದೆ. ತೂಕ ಮಾಡಿದಾಗ ಒಟ್ಟು 670 ಕೆಜಿ ಅಕ್ಕಿ ಇರುವುದು ದೃಢಪಟ್ಟಿದೆ.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಲಾಭ ಗಳಿಸಲು ಯತ್ನಿಸಿದ ಆರೋಪದ ಮೇರೆಗೆ ರಿಯಾಜ್  ಸಿದ್ದಿನಬ್ಬ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಹಾರ ನಿರೀಕ್ಷಕರು ದೂರು ನೀಡಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article