ಕೆಸಿಸಿಐ: 7ನೇ ಆವೃತ್ತಿಯ ಕಾನ್‌ಕ್ಲೇವ್
ದಕ್ಷಿಣ ಕನ್ನಡ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಉದ್ಯಮಿಗಳು, ಉದ್ಯಮ ನಾಯಕರು ಹಾಗೂ ವೃತ್ತಿಪರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಯಮ, ಆರ್ಥಿಕತೆ ಹಾಗೂ ಭವಿಷ್ಯದ ಅವಕಾಶಗಳ ಕುರಿತು ವಿಚಾರ ವಿನಿಮಯ ನಡೆಸಿದರು.
86 ವರ್ಷಗಳ ಇತಿಹಾಸ ಹೊಂದಿರುವ ಕೆಸಿಸಿಐ, ದಕ್ಷಿಣ ಕನ್ನಡವನ್ನು ನಿರಂತರ ಆರ್ಥಿಕ ಚಟುವಟಿಕೆ, ಉದ್ಯೋಗ ಸೃಷ್ಟಿ ಹಾಗೂ ಸಮಗ್ರ ಬೆಳವಣಿಗೆಯ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸರ್ ಹೇಳಿದರು. ಕೆಸಿಸಿಐನ ಇಂಡಸ್ಟ್ರಿ ಅಕಾಡೆಮಿಯಾ ಇಂಟರ್ಕನೆಕ್ಟ್ ಯೋಜನೆಯಡಿ ಈವರೆಗೆ 30ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬ್ರ್ಯಾಂಡ್ ಮಂಗಳೂರು ಉಪಕ್ರಮದ ಮೂಲಕ ನಗರದ ಕೈಗಾರಿಕೆ, ಸಂಸ್ಕೃತಿ ಹಾಗೂ ಅವಕಾಶಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯವೂ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಸೈಕಲ್ ಪ್ಯೂರ್ ಅಗರ್‌ಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ನ ನಿರ್ದೇಶಕ ಅರ್ಜುನ್ ರಂಗ ಜತೆ ಕೆಸಿಸಿಐ ಮಾಜಿ ಅಧ್ಯಕ್ಷ ಸಿಎ ಶ್ರೀನಿವಾಸ್ ಎಸ್. ಕಾಮತ್ ಸಂವಾದ ನಡೆಸಿದರು.
ಸಮಾರಂಭದಲ್ಲಿ ಕೆಸಿಸಿಐ ವತಿಯಿಂದ ಡಾ. ಮೊಯ್ದೀನ್ ತುಂಬೆ ಹಾಗೂ ಅರ್ಜುನ್ ರಂಗ ಅವರನ್ನು ಸನ್ಮಾನಿಸಲಾಯಿತು. ಕೆಸಿಸಿಐನ ಗೌರವ ಕಾರ್ಯದರ್ಶಿ ಅಶ್ವಿನ್ ಪೈ ಮಾರೂರು ಅತಿಥಿಗಳನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ಜೀತನ್ ಅಲೆನ್ ಸಿಕ್ವೇರಾ ವಂದಿಸಿದರು.
ಕಾನ್‌ಕ್ಲೇವ್ ಅಧಿವೇಶನದಲ್ಲಿ ತುಂಬೆ ಗ್ರೂಪ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ.ಮೊಯ್ದೀನ್ ತುಂಬೆಯವರು ಗಲ್ಫ್ ರಾಷ್ಟ್ರಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಸ್ಥಿರ ಮಾದರಿಗಳನ್ನು ನಿರ್ಮಿಸುವ ವಿಚಾರವನ್ನು ಮಂಡಿಸಿದರು. ಮರ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಿಂದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟ ಸಂದರ್ಭ ಎದುರಾದ ಸವಾಲುಗಳು, ಕುಟುಂಬದ ಬೆಂಬಲ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಳು ಸಂಸ್ಥೆಯ ಬೆಳವಣಿಗೆಯಲ್ಲಿ ವಹಿಸಿದ ಪಾತ್ರವನ್ನು ವಿವರಿಸಿದರು.