ಸದ್ಯಕ್ಕೆ ವ್ಯವಸಾಯಕ್ಕೆ ಡಿಸಿ ಮನ್ನಾ ಜಾಗ ಕೊಡಲು ಸಾಧ್ಯವಿಲ್ಲ ಎಸ್ಸಿ-ಎಸ್ಟಿ ಸಭೆಯಲ್ಲಿ ಡಿ.ಸಿ. ದರ್ಶನ್ ಎಚ್.ವಿ. ಸ್ಪಷ್ಟನೆ

ಸದ್ಯಕ್ಕೆ ವ್ಯವಸಾಯಕ್ಕೆ ಡಿಸಿ ಮನ್ನಾ ಜಾಗ ಕೊಡಲು ಸಾಧ್ಯವಿಲ್ಲ ಎಸ್ಸಿ-ಎಸ್ಟಿ ಸಭೆಯಲ್ಲಿ ಡಿ.ಸಿ. ದರ್ಶನ್ ಎಚ್.ವಿ. ಸ್ಪಷ್ಟನೆ


ಬಂಟ್ವಾಳ: ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಡಿಸಿ ಮನ್ನ ಜಾಗ ಲಭ್ಯತೆಯ ಪಟ್ಟಿ ಮಾಡಿಕೊಂಡಿದ್ದೇವೆ. ಸರಕಾರದ ಮುಂದಿನ ಆದೇಶದಂತೆ ಸದ್ಯದ ಮಟ್ಟಿಗೆ ವ್ಯವಸಾಯಕ್ಕೆ ಡಿಸಿ ಮನ್ನಾ ಜಾಗ ಕೊಡಲು ಸಾಧ್ಯವಿಲ್ಲ ಎಂದು ದರ್ಶನ್ ಎಚ್.ವಿ. ಅವರು ಮಂಗಳವಾರ ಬಂಟ್ವಾಳ ತಾ.ಪಂ.ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಠ ಪಂಗಡದ ವಿಶೇಷವಾದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸ್ಪಷ್ಟಪಡಿಸಿದ್ದಾರೆ.

ದಲಿತ ಮುಖಂಡ ಜನಾರ್ದನ ಬೋಳಂತೂರು ಅವರು ವಿಷಯ ಪ್ರಸ್ತಾವಿಸಿ 1985 ರಿಂದಲು ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಜಮೀನು ನೀಡಿಲ್ಲ. ಸರಕಾರದ ವತಿಯಿಂದ ಜಾಗ ನೀಡಲು ಆದೇಶಾಗಿದ್ದರೂ, ಜಮೀನು ನೀಡಲಾಗುತ್ತಿಲ್ಲ,ಎನ್ ಸಿ ಆರ್ ಮೂಲಕ ಉಳ್ಳವರಿಗೆ ಜಮೀನು ನೀಡಲಾಗುತ್ತಿದೆ. ಆದರೆ ಎಸ್ಸಿ-ಎಸ್ಟಿ ಸಮುದಾಯದ ಜನರಿಗೆ ಜಮೀನು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದರೂ ಪ್ರಯೋಜನವಾಗಲಿಲ್ಲ,ಹೀಗಿರುವಾಗ ಸಮುದಾಯದ ಅಭಿವೃದ್ಧಿ ಹೇಗೆ ಸಾಧ್ಯ? ಸರಕಾರಕ್ಕೆ ಜೀವ ಇದೆಯಾ ಎಂದು ಪ್ರಶ್ನಿಸಿದರೆ,ಅಕ್ರಮ-ಸಕ್ರಮದಲ್ಲಾದರೂ ಜಾಗ ಕೊಡಿ ಎಂದು ಮೋಹನ್ ಚೆಂಡ್ತಿಮಾರ್ ಆಗ್ರಹಿಸಿದರು.

ಇದಕ್ಕೆ ಜಿಲ್ಲಾಧಿಕಾರಿ ದರ್ಶನ್ ಪ್ರತಿಕ್ರಿಯಿಸಿ, ವ್ಯವಸಾಯಕ್ಕಾಗಿ ಜಮೀನು ನೀಡುವಷ್ಟು ಸರ್ಕಾರಿ ಜಾಗದ ಕೊರತೆಯಿದೆ. ಆದರೆ ಸರಕಾರ ಸೈಟ್ ನೀಡಲು ನಿರ್ದೇಶನ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ತಿಳಿಸಿದರು.

ಸರ್ಕಾರಿ ಜಾಗ ಒತ್ತುವರಿಗೆ ಅಗಿದ್ದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ತಾ.ಪಂ.ಇಒ, ತಹಶೀಲ್ದಾರ್ ಹಾಗೂ ಮುಖ್ಯಾಧಿಕಾರಿಯವರಿಗೆ ಜಿಲ್ಲಾಧಿಕಾರಿಯವರು ಈ ಸಂದರ್ಭ ಸೂಚಿಸಿದರು.

ಕೊರಗ ಸಮುದಾಯವನ್ನು ಮುಖ್ಯವಾಹಿನಿಗೆ ತನ್ನಿ:

ಎಸ್ಸಿ-ಎಸ್ಟಿ ಕುಂದುಕೊರತೆಯ ಈ ವಿಶೇಷ ಸಭೆಗೆ ಅದಿವಾಸಿ ಕೊರಗ ಸಮುದಾಯವನ್ನು ಆಹ್ವಾನಿಸಿ ಅಹವಾಲು ಅಲಿಸಬೇಕಾಗಿತ್ತು.ಅವರನ್ನು ಕೂಡ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಬೇಕು ಎಂದು ನಾರಾಯಣ ಪುಂಚಮೆ ಅವರು ಆಗ್ರಹಿಸಿದರು.

ಇದಕ್ಕೆ ಜಿಲ್ಲಾಧಿಕಾರಿ ದರ್ಶನ್ ಅವರು ಉತ್ತರಿಸಿ, ಸಭೆಗೆ ಅವರನ್ನು ಆಹ್ವಾನಿಸಲಾಗಿದೆ, ಒಂದಿಬ್ಬರು ಬಂದಿದ್ದಾರೆ. ಅವರ ಸಮಸ್ಯೆಗಳೇನಾದರೂ ಇದ್ದರೆ ನಮಗೆ ತಿಳಿಸಿದರೆ ಅವುಗಳನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗುರುತು ಪತ್ರ-ಹಕ್ಕುಪತ್ರ ನೀಡಿ:

ಈ ಸಂದರ್ಭ ಬೋಳಂತೂರು ಗ್ರಾಮದ ಮೈರೆ ಎಂಬವರು ಈ ಪ್ರದೇಶದ ಕೊರಗ ಸಮುದಾಯದ ಕುಟುಂಬಗಳಿಗೆ ನಿವೇಶನ ಭದ್ರತೆ ಒದಗಿಸಿ, ಹಕ್ಕುಪತ್ರ ನೀಡಬೇಕು. ಹಾಗೆಯೇ ನಮ್ಮ ಕುಲಕಸಬುಬುಟ್ಟಿ ತಯಾರಿಸಲು ಬಳ್ಳಿ ತರಲು ಹೋಗಬೇಕಾಗುತ್ತದೆ. ಆಗ ಅರಣ್ಯ ಇಲಾಖೆ ನಮ್ಮನ್ನು ಪ್ರಶ್ನಿಸುತ್ತದೆ. ಈ ನಿಟ್ಟಿನಲ್ಲಿ ಸಮುದಾಯದ ಸದಸ್ಯರಿಗೆ ಗುರುತಿನ ಚೀಟಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿಯವರ ಮುಂದೆ ತುಳುವಿನಲ್ಲಿ ಅಹವಾಲು ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಿಮಗೆ ಕನ್ನಡ ಅರ್ಥವಾಗುತ್ತದೆಯೇ? ನನಗೆ ತುಳು ಆರ್ಥ ಆಗುತ್ತದೆ ಆದರೆ ಮಾತನಾಡಲು ಬರುತ್ತಿಲ್ಲ. ಹಾಗಾಗಿ ಕನ್ನಡದಲ್ಲಿ ಉತ್ತರಿಸುತ್ತೇನೆ. ನಿಮ್ಮ ಸಮಸ್ಯೆ ನನಗೆ ಆರ್ಥ ಆಯಿತು. ಈ ಬಗ್ಗೆ ವಿಶೇಷ ಗಮನಹರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಡತ ನಾಪತ್ತೆ:

ಇದೇ ವೇಳೆ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ಅವರು ಬಂಟ್ವಾಳ ತಾಲೂಕು ಕಚೇರಿಯಲ್ಲಿ ಹಲವು ಕಡತಗಳು ಕಾಣೆಯಾಗಿದೆ.ಈ ಬಗ್ಗೆ ಹಲವು ಬಾರಿ ಮನವಿ, ಹೋರಾಟ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅದೇ ರೀತಿ ಕೆಲವೊಂದು ಅಗತ್ಯದ ಕಡತ ವಿಲೇವಾರಿಗೂ ವಿಳಂಬಿಸಲಾಗುತ್ತಿದೆ ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ಸಲ್ಲಿಸಿ ಆಗ್ರಹಿಸಿದರು.

ಅಶ್ರಮ ಶಾಲಾ ಕಟ್ಟಡ ತೆರವುಗೊಳಿಸಿಲ್ಲ:

ಬಿ.ಸಿ.ರೋಡಿನ ಡಾ. ಬಿ.ಆರ್. ಅಂಬೇಡ್ಕರ್ ವಸರಿ ಶಾಲೆ ನಾದುಸ್ಥಿತಿಯಲ್ಲಿದ್ದು, ಕಳೆದ 7 ವರ್ಷಗಳಿಂದ ಬೆಂಜನಪದವಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಈ ಹಳೇ ಕಟ್ಟಡವನ್ನು ಇನ್ನು ತೆರವುಗೊಳಿಸಿಲ್ಲ ಎಂದು ವಿಶ್ವನಾಥ ಚಂಡ್ತಿಮಾರ್ ಗಮನ ಸೆಳೆದರು.

ಸಮಾಜ ಕಲ್ಯಾಣಾಧಿಕಾರಿ ವಿನಯ ಕುಮಾರಿ ಪ್ರತಿಕ್ರಿಯಿಸಿ, ಆ ಸಮಾಜ ಕಲ್ಯಾಣ ಇಲಾಖೆಯ ಹೆಸರಿಗೆ ಇನ್ನು ವರ್ಗಾವಣೆಯಾಗಿಲ್ಲ, ಅದು ಪರಂಬೋಕು ಜಾಗದಲ್ಲಿರುವುದರಿಂದ ಸರಕಾರದ ಮಟ್ಟದಲ್ಲೇ ಬದಲಾವಣೆಯಾಗಬೇಕಾಗಿದೆ ಎಂದು ಡಿ.ಸಿ. ಅವರ ಗಮನಕ್ಕೆ ತಂದರು.

ಅಪಾಯಕಾರಿ ಮರಗಳ ತೆರವಿಗೆ ಸೂಚನೆ:

ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ಹಾಗೂ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ವಿಶ್ವನಾಥ ಚೆಂಡ್ತಿಮಾರ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿಯವರು ತಾಲೂಕಿನಲ್ಲಿ ಅಪಾಯಕಾರಿ 26 ಮರ ಹಾಗೂ 53 ಮರಗಳ ರೆಂಬೆ ತೆರವುಗೊಳಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.ಕಸ್ಬಾ ಗ್ರಾಮದ ಚಂಡ್ತಿಮಾರ್ ಎಂಬಲ್ಲಿ ಅಪಾಯಕಾರಿ ಮರಗಳ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಅರಣ್ಯ ಅಧಿಕಾರಿಗೆ ಸೂಚಿಸಿದರು.

ಅಲ್ಲಿಪಾದೆಯ ನೀರಪಲ್ಕೆ ಎಂಬಲ್ಲಿ ಅಕ್ರಮ ಕಲ್ಲಿನಕೋರೆ ಕಾರ್ಯಾಚರಿಸುವುದರಿಂದ ಇಲ್ಲಿರುವ ಎಸ್ಸಿ-ಎಸ್ಟಿ ಸಮುದಾಯದ ಹಲವು ಮನೆಗಳಿಗೆ ಹಾನಿಯಾಗಿದೆ,ಬೋರುವೆಲ್ ಬತ್ತಿಹೋಗಿದೆ. ರಸ್ತೆ ಡಾಮಾರೀಕರಣ ಕಿತ್ತು ಹೋಗಿದೆ. ಈ ಬಗ್ಗೆ ಗಣಿ ಇಲಾಕಜೆ, ಜಿಲ್ಲಾಡಳಿತ, ತಹಶೀಲ್ದಾರ್ ಅವರಿಗೂ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸತೀಶ್ ನೀರಪಲ್ಕೆ ಅವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಸಿ. ಅವರು ಕೋರೆ ಅನುಮತಿ ಪಡೆದು ನಿಯಾಮಾನುಸಾರವಾಗಿ ಕಾರ್ಯಾಚರಿಸುತ್ತಿದೆಯಾ ಎಂದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಶಾನಕ್ಕೆ ಜಾಗ ಕಾದಿರಿಸಿ:

ಸರಪಾಡಿ ಗ್ರಾಮದಲ್ಲಿ ಸ್ಮಶಾನ ನಿರ್ಮಾಣಕ್ಕೆ ಜಾಗ ಕಾದಿರಿಸಬೇಕು,ಪ್ರಸ್ತುತ ದೂರದ ಬಂಟ್ವಾಳ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಬೇಕಾದ ಪರಿಸ್ಥಿತಿ ಇದೆ ಎಂದು ಚಂದ್ರಹಾಸ ಬಳೆಯೂರು ಜಿಲ್ಲಾಧಿಕಾರಿವರ ಗಮನಕ್ಕೆ ತಂದರು. ಸ್ಮಶಾನಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಪಟ್ಟಿಯನ್ನು ಸಿದ್ಧಪಡಿಸಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಅಗತ್ಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎಸ್ಸಿ, ಎಸ್ಟಿ ಸಮುದಾಯವಿರುವ ತೋರಣಕಟ್ಟೆ, ಕುದ್ದುಪದವು, ವಿಟ್ಲ ಮಾರ್ಗವಾಗಿ ಬಂಟ್ವಾಳಕ್ಕೆ ಸರಕಾರಿ ಬಸ್ ಓಡಿಸುವಂತೆ ಹಲವು ಸಭೆಗಳಲ್ಲಿ ಪ್ರಸ್ತಾವಿಸಿದರೂ ಇನ್ನು ಕಾರ್ಯಗತವಾಗಿಲ್ಲ ಎಂದು ಮಹಾಲಿಂಗ ನಾಯ್ಕ್ ಗಮನಸೆಳೆದರಲ್ಲದೆ ಎಸ್ಸಿಗಳಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಆಗ್ರಹಿಸಿದರು.ಬಸ್ ಓಡಾಟಕ್ಕೆ ಸಂಬಂಧಿಸಿ ಗ್ಯಾರಂಟಿ ಸಮಿತಿ ಸಭೆಯಲ್ಲು ಚರ್ಚಿಸಲಾಗಿದೆ ಎಂದು ತಾ.ಪಂ.ಇಒ ಸಚ್ಚಿನ್ ಕುಮಾರ್ ತಿಳಿಸಿದರು. ಕಾನೂನುಅರಿವಿನ ಬಗ್ಗೆ ಕ್ರಮಕೈಗೊಳ್ಳುವಂತೆ ಡಿ.ಸಿ. ಅವರು ಸೂಚಿಸಿದರು.

ಮೂರು ತಿಂಗಳಿಗೊಮ್ಮೆ ಸಭೆಗೆ ಆಗ್ರಹ:

ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯೋರ್ವರು ಎಸ್ಸಿ-ಎಸ್ಟಿ ಸಮುದಾಯದ ಬಳಿಗಾಗಮಿಸಿ ಅಹವಾಲು ಅಲಿಸಿರವುದಕ್ಕೆ ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಗಂಗಾಧರ ಪರಾರಿ ಅವರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಪುರಸಭೆಯಿಂದ ತಮ್ಮ ಪ್ರದೇಶಕ್ಕೆ ಅನುದಾನ ದೊರೆಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದ್ದು, ಸಿಂಟೆಕ್ಸ್ ಟ್ಯಾಂಕ್ ಒದಗಿಸಬೇಕು ಎಂದು ಮನವಿ ಮಾಡಿದರಲ್ಲದೆ ನಮ್ಮ ಸಮುದಾಯದ ಸಮಸ್ಯೆಗಳನ್ನು ನಿರಂತರವಾಗಿ ಆಲಿಸಿ ಪರಿಹಾರ ಕಂಡುಕೊಳ್ಳಲು ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಸಭೆ ನಡೆಸಬೇಕು ಎಂದು ಗಂಗಾಧರ ಅವರು ವಿನಂತಿಸಿದರು.

ದಲಿತ ಮುಖಂಡರಾದ ಸತೀಶ್ ಅರಳ, ಗೋಪಾಲ, ಕೇಶವ ನಾಯ್ಕ್ ವಾಸು ಮಧ್ವ,ಪ್ರೀತಮ್ ಪಲ್ಲಮಜಲು, ಚಿದಾನಂದ ಪೆರಾಜೆ, ಬೇಬಿ ಮೈರನ ಪಾದೆ ಮೊದಲಾದವರು ನಿವೇಶನ, ಭೂಮಿ, ಕುಡಿಯುವ ನೀರು, ಸ್ಮಶಾನ, ಕಲ್ಲುಕೋರೆ, ಸರ್ಕಾರಿ ಜಾಗ ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಮನಸೆಳೆದರು.

ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಅರ್ಚಿತ್ ಡೋಂಗ್ರೆ, ತಹಶೀಲ್ದಾರ್ ಮಂಜುನಾಥ್, ಇಒ ಸಚ್ಚಿನ್ ಕುಮಾರ್, ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ಕೆ.ಬಿ. ಹಾಗೂ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯಕುಮಾರಿ ಸ್ವಾಗತಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article