ಆ.9ರಂದು ನಿವೃತ್ತ ಯೋಧರು, ವೀರ ನಾರಿಯರಿಗೆ ಗೌರವ

ಆ.9ರಂದು ನಿವೃತ್ತ ಯೋಧರು, ವೀರ ನಾರಿಯರಿಗೆ ಗೌರವ

ಮಂಗಳೂರು: ದೇಶದ ರಕ್ಷಣೆಗೆ ಸೇವೆ ಸಲ್ಲಿಸಿದ ಕುಲಾಲ ಸಮುದಾಯದ ನಿವೃತ್ತ ವೀರ ಯೋಧರು ಹಾಗೂ ವೀರ ನಾರಿಯರನ್ನು ಗೌರವಿಸುವ ವಿಶೇಷ ಸಮಾರಂಭ ಆ. 9ರಂದು ನಗರದ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕುಲಾಲ ಸಮುದಾಯಕ್ಕೆ ಸೇರಿದ 60ಕ್ಕೂ ಅಧಿಕ ನಿವೃತ್ತ ವೀರ ಯೋಧರು ಹಾಗೂ ವೀರ ನಾರಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕ ನೇವಿ ವಿಭಾಗದ ಲೆಫ್ಟಿನೆಂಟ್ ಕಮಾಂಡರ್ ಡಾ.ಯತೀಶ್ ಕುಮಾರ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಗ್ಗೆ 11.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ದೇಶದ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ ಯೋಧರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಕ್ಷೇತ್ರದ ನಾಗದೇವರು ಹಾಗೂ ದೈವ-ದೇವರ ಅನುಗ್ರಹಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಬೆಂಗಳೂರಿನ ಶ್ರೀ ರಾಧಾಕೃಷ್ಣ ಬಂಜನ್ ಮಹಾ ಪ್ರಾಯೋಜಕರಾಗಿದ್ದು, ಮೈಸೂರಿನ ಹಿಲ್ ಸೈಡ್ ಆರ್ಕಿಟೆಕ್ಟ್ ಸಂಸ್ಥೆ ಸಹಕಾರ ನೀಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ಅಧ್ಯಕ್ಷ ಡಿ. ಚಂದಪ್ಪ ಮೂಲ್ಯ, ಶ್ರೀ ವೀರನಾರಾಯಣ ದೇವಸ್ಥಾನ, ಕುಲಶೇಖರದ ಅಧ್ಯಕ್ಷ ಸುಂದರ್ ಮೂಲ್ಯ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಹಾಗೂ ಬಿಎಸ್‌ಎನ್‌ಎಲ್‌ನ ನಿವೃತ್ತ ಡಿಜಿಎಂ ಐತಪ್ಪ ಮೂಲ್ಯ ಭಾಗವಹಿಸಲಿದ್ದಾರೆ ಎಂದರು.

ದೇಶ ಸೇವೆಯಲ್ಲಿ ಅಮೂಲ್ಯ ಕೊಡುಗೆ ನೀಡಿದ ನಿವೃತ್ತ ಯೋಧರು ಹಾಗೂ ವೀರ ನಾರಿಯರನ್ನು ಗೌರವಿಸುವುದು ಸಮಾಜದ ಹೆಮ್ಮೆಯ ಸಂಗತಿಯಾಗಿದೆ. ಅವರ ಸೇವೆಯನ್ನು ಸ್ಮರಿಸುವುದರೊಂದಿಗೆ ಯುವ ಪೀಳಿಗೆಯಲ್ಲಿ ದೇಶಭಕ್ತಿಯ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಿವೃತ್ತ ಯೋಧ ಗೋಪಾಲ್ ಎಸ್. ಕುಲಾಲ್, ಮೋಹನ್ ಕಡಂಬಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article