ವೇಣೂರು ಎಸ್‌ಡಿಎಂ ಐಟಿಐ 41ನೇ ಬ್ಯಾಚ್‌ಗೆ ಚಾಲನೆ
ಮುಖ್ಯ ಅತಿಥಿಯಾಗಿದ್ದ ಸುರಕ್ಷಾ ಕರಿಯರ್ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ರೈ ಮಾತನಾಡಿ, "ಭವಿಷ್ಯದ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ತಾಂತ್ರಿಕ ಕೌಶಲ್ಯ ಅತ್ಯಂತ ಮುಖ್ಯ. ವೃತ್ತಿ ಜೀವನದ ಆರಂಭದ ವರ್ಷಗಳಲ್ಲಿ ಸಂಬಳದ ಬಗ್ಗೆ ಹೆಚ್ಚು ಗಮನ ಹರಿಸದೆ, ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದರತ್ತ ಹೆಚ್ಚಿನ ಒತ್ತು ನೀಡಬೇಕು. ಕೌಶಲ್ಯ ಇದ್ದರೆ ಉತ್ತಮ ಅವಕಾಶಗಳು ಮತ್ತು ಉತ್ತಮ ಸಂಬಳ ತಾನಾಗಿಯೇ ದೊರೆಯುತ್ತವೆ" ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪದ್ಮಂಭ ಗ್ರೂಪ್ಸ್‌ನ ಜಿನರಾಜ್ ಜೈನ್ ಉಪಸ್ಥಿತರಿದ್ದು, "ವಿದ್ಯಾರ್ಥಿಗಳು ಕೇವಲ ಉದ್ಯೋಗವನ್ನು ಹುಡುಕುವವರಾಗದೆ, ಸ್ವಯಂ ಉದ್ಯೋಗ ಆರಂಭಿಸಿ ಇತರರಿಗೂ ಉದ್ಯೋಗ ನೀಡುವ ಉದ್ಯಮಿಗಳಾಗಿ ಬೆಳೆಯಬೇಕು. ಸಮಾಜಕ್ಕೆ ಉದ್ಯೋಗ ಸೃಷ್ಟಿಸುವ ಜವಾಬ್ದಾರಿಯನ್ನು ಯುವಕರು ವಹಿಸಬೇಕು" ಎಂದು ಕರೆ ನೀಡಿದರು.
ಸಂಸ್ಥೆಯ ಪ್ರಾಂಶುಪಾಲ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು.
ಪ್ರಸನ್ನಕುಮಾರ್ ಪ್ರಾರ್ಥಿಸಿ, ರತ್ನಾಕರ ರಾವ್ ಎಚ್. ಸ್ವಾಗತಿಸಿದರು. ಪದ್ಮಪ್ರಸಾದ್ ಬಸ್ತಿ ಕಾರ್ಯಕ್ರಮ ನಿರೂಪಿಸಿ, ಸತೀಶ್ ವಂದಿಸಿದರು.
