ಜಿಲ್ಲಾ ಮಟ್ಟದ ದಲಿತ ಕುಂದು ಕೊರತೆ ಸಭೆ, ಡಿ.ಸಿ. ಅನುಪಸ್ಥಿತಿಗೆ ಆಕ್ರೋಶ: ಸಭೆ ಮುಂದೂಡಿಕೆ

ಜಿಲ್ಲಾ ಮಟ್ಟದ ದಲಿತ ಕುಂದು ಕೊರತೆ ಸಭೆ, ಡಿ.ಸಿ. ಅನುಪಸ್ಥಿತಿಗೆ ಆಕ್ರೋಶ: ಸಭೆ ಮುಂದೂಡಿಕೆ


ಮಂಗಳೂರು: ಪಡೀಲ್‌ನ ಪ್ರಜಾಸೌಧದಲ್ಲಿ ಗುರುವಾರ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮುಖಂಡರ ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿ ಬಗ್ಗೆ ದಲಿತರು ಒಕ್ಕೊರಲಿನಿಂದ ಅಸಮಾಧಾನ ವ್ಯಕ್ತಪಡಿಸಿದ ಪರಿಣಾಮ ಸಭೆಯನ್ನು ಮುಂದೂಡಿದ ಘಟನೆ ನಡೆಯಿತು.

ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಿಲ್ಲೆಯ ವಿವಿಧ ಭಾಗಗಳಿಗೆ ವಿಪತ್ತು ಪರಿಹಾರ ಕಾರ್ಯಾಚರಣೆ ಕುರಿತಂತೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಅವರ ಜತೆ ಜಿಲ್ಲಾಧಿಕಾರಿ ದರ್ಶನ್ ಅವರೂ ತೆರಳಿದ್ದರು. ಆದರೆ ಪೂರ್ವ ನಿಯೋಜಿತ ದಲಿತರ ಕುಂದು ಕೊರತೆ ಸಭೆಗೆ ಜಿಲ್ಲೆಯ ವಿವಿಧ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ದಲಿತರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮಾಯಿಸಿದ್ದರು. 

ಜಿಲ್ಲಾಧಿಕಾರಿಯ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆಗೆ ಮುಂದಾದಾಗ ದಲಿತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭೆಯನ್ನು ರದ್ದುಗೊಳಿಸಿ ಮುಂದೂಡುವಂತೆ ಒತ್ತಾಯಿಸಿದರು. 

‘ಕಳೆದ ಸುಮಾರು ಒಂದೂವರೆ ವರ್ಷದ ಬಳಿಕ ಸಭೆಯನ್ನು ಕರೆಯಲಾಗಿದೆ. ಅದು ಪೂರ್ವನಿಯೋಜಿತವಾಗಿ ಒಂಭತ್ತು ದಿನಗಳ ಹಿಂದೆಯೇ ಸಭೆಯ ನೋಟೀಸು ನೀಡಲಾಗಿತ್ತು. ಹಾಗಿದ್ದರೂ ಜಿಲ್ಲಾಧಿಕಾರಿ ಸಭೆಗೆ ಗೈರು ಹಾಜರಾಗಿದ್ದಾರೆ. ಒಂದು ವೇಳೆ ತುರ್ತು ಕಾರ್ಯದ ನಿಮಿತ್ತ ಇಂದು ಜಿಲ್ಲಾಧಿಕಾರಿಗೆ ಸಭೆ ನಡೆಸಲು ಸಾಧ್ಯವಾಗಿರದಿದ್ದರೆ ನಿನ್ನೆಯೇ ಈ ಬಗ್ಗೆ ಮಾಹಿತಿಯನ್ನು ನೀಡಬಹುದಿತ್ತು’ ಎಂದು ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ)ಯ ಸಂಘಟನಾ ಸಂಚಾಲಕರಾದ ರಘು ಎಕ್ಕಾರು, ಕೃಷ್ಣಾನಂದ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದರು. 

ಡಿಸಿಮನ್ನಾ, ಮೀಸಲಾತಿ ಕುರಿತಂತೆ ಜಿಲ್ಲಾ ಮಟ್ಟದ ದಲಿತರ ಹಲವು ಸಮಸ್ಯೆಗಳಿವೆ. ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರೂ ಅಗತ್ಯವಿದೆ. ಇಷ್ಟೊಂದು ಜನ ಸೇರಿರುವಾಗ ಎಷ್ಟೊಂದು ಜ್ವಲಂತ ಸಮಸ್ಯೆಗಳು ಇವೆ ಎಂಬ ಅರಿವು ಬೇಕಿತ್ತು. ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಸಭೆ ನಡೆದರೆ ಅದು ನಾಮಕಾವಸ್ತೆಗೆ ಮಾತ್ರ ಆಗಲಿದೆ. ನಮ್ಮ ನೋವು, ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸುವವರು ಯಾರು ಎಂದು ದಲಿತ ನಾಯಕರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸಭೆಯನ್ನು ಮುಂದೂಡಿ ಎಂದು ಆಗ್ರಹಿಸಿದರು. 

ಸಭೆಯಲ್ಲಿ ನೂರಾರು ಸಂಖ್ಯೆಯ ದಲಿತ ಮುಖಂಡರ ಜತೆ ವಿವಿಧ ಇಲಾಖೆಗಳ ಅಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. 

ದಲಿತ ನಾಯಕ ರಘು ಎಕ್ಕಾರು, ಶೇಖರ ಲಾಯಿಲ ಆಕ್ರೋಶ  ವ್ಯಕ್ತಪಡಿಸಿ ಮಾತನಾಡಿದಾಗ,  ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಲತಾ ಅವರು ದಲಿತ ಮುಖಂಡರನ್ನು ಸಮಾಧಾನ ಮಾಡಲೆತ್ನಿಸಿದಾಗ, ನೀವು ಸಮಜಾಯಿಷಿ ನೀಡಬಹುದು ಆದರೆ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳು ಜಿಲ್ಲಾಧಿಕಾರಿ ಇಲ್ಲದೆ ಇತ್ಯರ್ಥವಾಗಲು ಸಾಧ್ಯವಾಗದು ಎಂದು ದಲಿತ ನಾಯಕರು ಸಭೆಯನ್ನು ಮುಂದೂಡುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು. 

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ರಾಜು ಅವರು ಜಿಲ್ಲಾಧಿಕಾರಿಗೆ ಮೊಬೈಲ್ ಕರೆಯ ಮೂಲಕ ಮಾತುಕತೆ ನಡೆಸಿ, ಬಳಿಕ ಮುಖಂಡರನ್ನು ಉದ್ದೇಶಿಸಿ ‘ನಿಮ್ಮ ಕೋರಿಕೆಯ ಮೇರೆಗೆ ಜಿಲ್ಲಾಧಿಕಾರಿಯವರು ಆ. 20ಕ್ಕೆ ಸಭೆಯನ್ನು ಮರುನಿಗದಿಪಡಿಸಿದ್ದಾರೆ’ ಎಂದರು.  ಜೈ ಭೀಮ್ ಎನ್ನುತ್ತಾ ದಲಿತ ಮುಖಂಡರು ಸಭಾಂಗಣದಿಂದ ಹೊರನಡೆದರು. 

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇತ್ತೀಚೆಗೆ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಮಟ್ಟದ ದಲಿತರ ಸಭೆಯನ್ನು ಆಯೋಜಿಸದಿರುವ ಬಗ್ಗೆ ದಲಿತ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸಭೆಯನ್ನು ಒಂದು ವಾರದ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಿಗದಿಪಡಿಸಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article