ಸಂತ ಆನ್ಸ್ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಕೊಠಡಿ ಒದಗಿಸಲು CITU ಮನವಿ
ಪೋರ್ಟ್ ವಾರ್ಡ್ ವ್ಯಾಪ್ತಿಯ ಆನ್ಸ್ ಶಾಲೆಯ ಆವರಣದಲ್ಲಿರುವ ಈ ಅಂಗನವಾಡಿ ಕೇಂದ್ರದಲ್ಲಿ ಪ್ರಸ್ತುತ ಸುಮಾರು 20 ಮಕ್ಕಳು ಈ ಕೇಂದ್ರಕ್ಕೆ ಬರುತ್ತಿದ್ದಾರೆ. ಅಂಗನವಾಡಿ ಶಿಕ್ಷಕಿಯ ನಿರಂತರ ಪ್ರಯತ್ನದಿಂದ ಮಕ್ಕಳನ್ನು ಕೇಂದ್ರಕ್ಕೆ ಕರೆತರುವಲ್ಲಿ ಉತ್ತಮ ಸ್ಪಂದನೆ ದೊರಕುತ್ತಿದೆ.ಆದರೆ, ಈ ಅಂಗನವಾಡಿ ಕೇಂದ್ರಕ್ಕೆ ಮಕ್ಕಳಿಗೆ ಅನುಕೂಲವಾಗುವಂತಹ ಸಮರ್ಪಕ ಹಾಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದಿರುವುದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ.ಮಕ್ಕಳ ಕಲಿಕೆ, ಆಟ, ವಿಶ್ರಾಂತಿ ಹಾಗೂ ಪೌಷ್ಟಿಕ ಆಹಾರ ನೀಡುವಂತಹ ಚಟುವಟಿಕೆಗಳಿಗೆ ಅಗತ್ಯವಿರುವಷ್ಟು ಸ್ಥಳಾವಕಾಶ ಇಲ್ಲವಾಗಿದೆ.
ಅಲ್ಲದೆ, ಮಕ್ಕಳಿಗೆ ಸೂಕ್ತವಾದ ಕಲಿಕಾ ಸ್ಥಳ ಇಲ್ಲ. ಅಡುಗೆ ಕೋಣೆ ಸಮರ್ಪಕವಾಗಿಲ್ಲ. ಆಹಾರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಇಡಲು ಅಗತ್ಯವಿರುವ ದಾಸ್ತಾನು ಕೊಠಡಿ ವ್ಯವಸ್ಥೆ ಸಮರ್ಪಕವಾಗಿಲ್ಲ.ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿಲ್ಲ.
ಈ ಕಾರಣದಿಂದಾಗಿ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕರೆದುಕೊಂಡು ಬರುವ ಕೆಲವು ಪೋಷಕರು ಅಲ್ಲಿನ ಕೊಠಡಿಯ ಪರಿಸ್ಥಿತಿಯಿಂದಾಗಿ ಮುಂದಿನ ದಿನಗಳಲ್ಲಿ ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರ್ಕಾರದ ಅಂಗನವಾಡಿ ವ್ಯವಸ್ಥೆಯ ಉದ್ದೇಶವೇ ದುರ್ಬಲಗೊಳ್ಳುವ ಸಾಧ್ಯತೆಯಿದೆ.
ಅಂಗನವಾಡಿ ಕೇಂದ್ರಗಳು ಕೇವಲ ಆಹಾರ ನೀಡುವ ಸ್ಥಳಗಳಲ್ಲ. ಅವು ಮಕ್ಕಳ ಆರಂಭಿಕ ಶಿಕ್ಷಣ, ಪೌಷ್ಟಿಕತೆ, ಆರೋಗ್ಯ ಮತ್ತು ಸಮಗ್ರ ಬೆಳವಣಿಗೆಗೆ ಅಡಿಪಾಯ ಹಾಕುವ ಕೇಂದ್ರಗಳಾಗಿವೆ. ಆದ್ದರಿಂದ ಅಂಗನವಾಡಿಗೆ ಬರುವ ಪ್ರತಿಯೊಂದು ಮಗುವಿಗೂ ಸುರಕ್ಷಿತ, ಸ್ವಚ್ಛ ಹಾಗೂ ಗೌರವಯುತ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು CITU ತನ್ನ ಮನವಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ನಿಯೋಗದಲ್ಲಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು,DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಉಪಸ್ಥಿತರಿದ್ದರು.