ಸಂತ ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ‘ಭಾವನಾತ್ಮಕ ಸ್ವಾಸ್ಥ್ಯ’: ಕಾರ್ಯಗಾರ
Friday, August 21, 2026
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ‘ಭಾವನಾತ್ಮಕ ಸ್ವಾಸ್ಥ್ಯ" ಎಂಬ ವಿಷಯದ ಕುರಿತು ಕಾರ್ಯಗಾರವು ಆ.20 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ವಿವೇಕಾನಂದ ಕಾಲೇಜು (ಸ್ವಾಯತ್ತ) ಇದರ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಮಾತನಾಡಿ, ಭಾವನಾತ್ಮಕ ಸ್ವಾಸ್ಥ್ಯ ಇಂದಿನ ಕೃತಕ ಬುದ್ಧಿಮತ್ತೆ ಯುಗದಲ್ಲಿ ಅತ್ಯಂತ ಮುಖ್ಯವಾದ ವಿಷಯವಾಗಿದ್ದು, ನಮ್ಮ ಮತ್ತು ಬೇರೆಯವರ ಭಾವನೆಗಳಿಗೆ ನಾವು ಕೊಡುವ ಮೌಲ್ಯ ಅತ್ಯಂತ ಮಹತ್ವದ್ದಾಗಿದೆ. ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಯುವ ಜನರ ಭಾವನಾತ್ಮಕ ಸ್ವಾಸ್ಥ್ಯದ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರು ಮತ್ತು ಪೋಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಸಕಾರಾತ್ಮಕ ಮಾಹಿತಿಯನ್ನು ನೀಡಬೇಕು. ವಿದ್ಯಾರ್ಥಿಗಳು ಪ್ರಬಲ ಇಚ್ಛಾ ಶಕ್ತಿಯನ್ನು ಹೊಂದಿದ್ದು, ಸಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಮುನ್ನಡೆಸಬೇಕು. ಯಾವುದೇ ಬಾಹ್ಯ ಶಕ್ತಿಗಳು ಅಥವಾ ಆಕರ್ಷಣೆಗಳು ನಿಮ್ಮ ಭಾವನೆಗಳಿಗೆ ಪರಿಣಾಮ ಬೀರದಂತೆ ವಿದ್ಯಾರ್ಥಿನಿಯರು ಆಂತರಿಕವಾಗಿ ಪ್ರಬಲರಾಗಿರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಯುವ ಜನರಲ್ಲಿ ಭಾವನಾತ್ಮಕ ಸ್ವಾಸ್ಥ್ಯದ ಅರಿವಿನ ಅಗತ್ಯತೆಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇದ್ದು, ಭಾವನಾತ್ಮಕ ಸ್ವಾಸ್ತ್ಯವು ಮಾನಸಿಕ ಆರೋಗ್ಯದ ಭಾಗವಾಗಿದ್ದು, ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಹಿಳಾ ಸಬಲೀಕರಣ ಘಟಕದ ನಿರ್ದೇಶಕರಾದ ಸತ್ಯಾಲತಾ ರೈ, ಅವಿನಾ ಮಾಡ್ತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿಗಳಾದ ವಿಯೋಲಾ ಕ್ರಾಸ್ತಾ ಸ್ವಾಗತಿಸಿ, ಗ್ಲೆನಿಶಾ ವಂದಿಸಿದರು. ಬೋಜಮ್ಮ ಕಾರ್ಯಕ್ರಮ ನಿರೂಪಿಸಿದರು.
