ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪ ಸಾಬೀತು: 35 ಸಾವಿರ ದಂಡ, 5 ಕಾರಾಗೃಹ ಶಿಕ್ಷೆ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪ ಸಾಬೀತು: 35 ಸಾವಿರ ದಂಡ, 5 ಕಾರಾಗೃಹ ಶಿಕ್ಷೆ


ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ.35 ಸಾವಿರ ದಂಡ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಲಾ ಚಕಲಬ್ಬಿ ಅವರು ತೀರ್ಪು ನೀಡಿದ್ದಾರೆ.

ಕುದ್ಮಾರು ಗ್ರಾಮದ ದಿ. ಕುಂಞಪ್ಪ ಬ್ಯಾರಿ ಎಂಬವರ ಪುತ್ರ ಅಬ್ದುಲ್ಲಾ ಶಿಕ್ಷೆಗೆ ಗುರಿಯಾದ ಆರೋಪಿ. 2020ರ ಫೆಬ್ರವರಿ 14ರಂದು ಬೆಳಗ್ಗೆ 10 ವರ್ಷದ ಬಾಲಕಿ ತನ್ನ ತಾಯಿಯ ಸೂಚನೆಯಂತೆ ಎಳನೀರು ಖರೀದಿಸಲು ಆರೋಪಿಯ ಅಂಗಡಿಗೆ ತೆರಳಿದ್ದಳು. ಈ ಸಂದರ್ಭ ಚಿಲ್ಲರೆ ನೀಡುವುದಾಗಿ ಹೇಳಿ ಬಾಲಕಿಯನ್ನು ಅಂಗಡಿಯೊಳಗೆ ಕರೆದುಕೊಂಡು ಹೋಗಿ, ಜ್ಯೂಸ್ ಹಾಗೂ ತಿನ್ನಲು ಏನಾದರೂ ಬೇಕೇ ಎಂದು ಪುಸಲಾಯಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿತ್ತು. 

ಬಾಲಕಿ ವಿರೋಧ ವ್ಯಕ್ತಪಡಿಸಿ ಹೊರಬರಲು ಮುಂದಾದಾಗ ಆರೋಪಿ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಘಟನೆ ಕುರಿತು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆಯಲ್ಲಿ ಅಭಿಯೋಗ ಪರ ಒಟ್ಟು 16 ಸಾಕ್ಷಿಗಳನ್ನು ವಿಚಾರಿಸಲಾಯಿತು. ಅಭಿಯೋಗ ಮತ್ತು ಆರೋಪಿತನ ಪರ ವಾದವನ್ನು ಆಲಿಸಿದ ನ್ಯಾಯಾಲಯವು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಪೋಕ್ಸೋ ಕಾಯ್ದೆಯ ಕಲಂ 10 ರಡಿ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ರೂ.35 ಸಾವಿರ ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ ರೂ.20 ಸಾವಿರವನ್ನು ಬಾಲಕಿಗೆ ಪಾವತಿಸುವಂತೆ ಆದೇಶಿಸಿದೆ. 

ಇದಲ್ಲದೆ ಬಾಲಕಿಗೆ ರೂ.1.50 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಸರಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article