ಸಮ ಸಮಾಜಕ್ಕಾಗಿ ರಾಜಕೀಯ ಪಕ್ಷ ಕಟ್ಟುತ್ತೇವೆ: ಚೇತನ್

ಸಮ ಸಮಾಜಕ್ಕಾಗಿ ರಾಜಕೀಯ ಪಕ್ಷ ಕಟ್ಟುತ್ತೇವೆ: ಚೇತನ್

ಮಂಗಳೂರು: ಜನಪರ ಹೋರಾಟಗಾರರು, ಸಂಘಟನೆಗಾರರು, ಚಳವಳಿಗಾರರ ಜೊತೆ ಸೇರಿ ಅಖಂಡ ಕರ್ನಾಟಕಕ್ಕೆ ಸಮ ಸಮಾಜ ಕಟ್ಟಬೇಕು ಎಂಬ ಉದ್ದೇಶದಿಂದ ಉತ್ತಮ ರಾಷ್ಟ್ರ ಕಟ್ಟುವುದಕ್ಕಾಗಿ ರಾಜಕೀಯ ಪಕ್ಷ ಕಟ್ಟುತ್ತೇವೆ ಎಂದು ಹೋರಾಟಗಾರ, ಅಹಿಂಸಾ ಚೇತನ್ ಘೋಷಿಸಿದ್ದಾರೆ.

ಅವರು ಶನಿವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಪ್ರಸ್ತುತ ರಾಜಕೀಯವಾಗಿ ನಡೆಯುತ್ತಿರುವ ಬೆಳವಣಿಗೆ, ಸರ್ಕಾರದ ನಿರ್ಲಕ್ಷ್ಯತನವನ್ನು ವಿರೋಧಿಸಲು ಜನಪರ ಆಡಳಿತಕ್ಕಾಗಿ ರಾಜಕೀಯ ಪಕ್ಷದ ಮೂಲಕವೇ ಪರಿಹಾರವಿದೆ. ತಮ್ಮ ಕುರ್ಚಿ ಅಲುಗಾಡುತ್ತದೆ ಎಂದ ಕೂಡಲೇ ಕಿವುಡ, ಕುರುಡ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. ಕರ್ನಾಟಕಕ್ಕೆ ಪರಿಹಾರ, ಪರ್ಯಾಯಬೇಕು. ಅದಕ್ಕಾಗಿ ಸಮಾನತೆ, ಸಂವಿಧಾನದಂತೆ ನಡೆಯುವ ಪಕ್ಷಬೇಕು. ಅದಕ್ಕಾಗಿ ಪ್ರಾದೇಶಿಕ ಪಕ್ಷ ಕಟ್ಟಿ ರಾಜ್ಯವನ್ನು ಬಲಿಷ್ಠ ಮಾಡಲು ಕೆಲಸ ಮಾಡಲಾಗುವುದು. ನಮ್ಮ ಸಿದ್ಧಾಂತದಂತೆ ನಡೆಯುವ, ಸಮಸಮಾಜ, ಸಮಾನತೆ, ನ್ಯಾಯ, ಸಂವಿಧಾನದಂತೆ ನಡೆಯುವ ಉದ್ದೇಶದಂತೆ ಪಕ್ಷಕ್ಕೆ ಹೆಸರಿಡಲಾಗುವುದು, ಅದರ ನೋಂದಾಣಿ ಪ್ರಕ್ರಿಯೆ ನಡೆಯುತ್ತಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿ, ರಾಜಕೀಯ ಪಕ್ಷ ಲೋಕಾರ್ಪಣೆ ಮಾಡುವ ಬಗ್ಗೆ ತಯಾರಿ ನಡೆಯುತ್ತಿದೆ ಎಂದರು. ಅದಕ್ಕಾಗಿ ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ರಾಜ್ಯದಲ್ಲಿ ಸಂಚರಿಸಿ ಸಭೆ ನಡೆಸಲಾಗುತ್ತಿದೆ ಎಂದರು.

ಪ್ರಜಾಕೀಯ ಅರ್ಥ ಆಗಿಲ್ಲ:

ಪ್ರಜಾಕೀಯ ಪಕ್ಷದವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಎಷ್ಟು ಸಮಾಜದ ಸಮಸ್ಯೆಗಳ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಅವರ ಕೆಲಸ ಮಾಡಲಿ, ಅವರು ಪರಿಹಾರ ಕೊಡ್ತಾರೆ ಎಂಬ ಬಗ್ಗೆ ನನಗೆ ಗೊತ್ತಾಗಿಲ್ಲ. ಅವರ ಪಕ್ಷದ ಬಗ್ಗೆ ನನಗೂ ಅರ್ಥ ಆಗಿಲ್ಲ, ಅವರು ಹೇಳುತ್ತಿರುವ ಪ್ರಜಾಕೀಯ ಬಗ್ಗೆ ಅವರಿಗೆಷ್ಟು ಅರ್ಥವಾಗಿಯೋ ಗೊತ್ತಿಲ್ಲ ಎಂದರು.

ಬಿಡದಿ ಟೌನ್‌ಶಿಪ್ ಆಗಬಾರದು:

ಬಿಡದಿ ಟೌನ್‌ಶಿಪ್ ಆಗಬಾರದು, ರೈತರು ಭೂಮಿ ಕೈತಪ್ಪಬಾರದು ಎಂಬುದು ನನ್ನ ಆಗ್ರಹ. ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಸಿದು ಕಟ್ಟಡ ಕಟ್ಟಿ, ಲ್ಯಾಂಡ್ ಮಾಫಿಯಾ ಲಾಭಿಗಳು ಒಳ್ಳೆಯದಲ್ಲ. ಆ ಯೋಜನೆಯೇ ತಪ್ಪು. ಬೆಂಗಳೂರನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಲಾಗುತ್ತದೆ ಹೊರತು, ದಕ್ಷಿಣ ಕನ್ನಡ, ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗಗಳನ್ನು ನಿರ್ಲಕ್ಷ್ಯ ಮಾಡಿದರೆ ಒಳ್ಳೆಯದಲ್ಲ. ದೆಹಲಿ ಪಕ್ಷಗಳ ಉದ್ದೇಶವೇ ಅಧಿಕಾರ ಲಾಭಕ್ಕಾಗಿ ಅಧಿಕಾರ ವಿಸ್ತರಣೆ, ಸ್ವಂತ ಲಾಭ ಮಾಡಿಕೊಳ್ಳುವುದು ಆಗಿದೆ ಎಂದು ಅವರು ಆರೋಪಿಸಿದರು.

ಮಹಿಳಾ ಮೀಸಲು ಒಳ್ಳೆಯದು:

ಕೇಂದ್ರ ಸರ್ಕಾರ ಎಫ್‌ಸಿಆರ್‌ಎ (ಭಾರತದಲ್ಲಿ ವಿದೇಶಿ ದೇಣಿಗೆ ಮತ್ತು ಹಣಕಾಸಿನ ನೆರವನ್ನು ಸ್ವೀಕರಿಸುವ ಸಂಸ್ಥೆಗಳ ನಿಂಯಂತ್ರಿಸುವ ಕಾನೂನು) ಬಿಲ್ ತರಲು ಹೊರಟಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಅಧ್ಯಯನ ಮಾಡಬೇಕಿದೆ. ಬಳಿಕ ಉತ್ತರಿಸುತ್ತೇನೆ. ನಾನು ಕೇಂದ್ರ-ರಾಜ್ಯ ಸರ್ಕಾರ ಮಾಡಿದೆಲ್ಲ ತಪ್ಪು, ಮಾಡಿದೆಲ್ಲ ಸರಿ ಎಂದು ಹೇಳಲ್ಲ ಎಂದರು.

ಮಹಿಳಾ ಮೀಸಲಾತಿ ನೀಡಿರುವುದು ಒಳ್ಳೆಯ ವಿಚಾರ. ಮೀಸಲಾತಿ ಬೇಕು. ಮಹಿಳಾ ಮೀಸಲಾತಿ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಾರೆ. ಆದರೆ ಒಂದು ಮಹಿಳೆಗೂ ಸಚಿವ ಸ್ಥಾನ ರಾಜ್ಯದಲ್ಲಿ ನೀಡಿಲ್ಲ. ನಿಮ್ಮ ಪರವಾಗಿ ಇರುವವರಿಗೆ ಮಾತ್ರ ಹುದ್ದೆ ನೀಡಿದರೆ ರಾಜ್ಯಕ್ಕೆ ಒಳ್ಳೆಯದಲ್ಲ, ಬೆಂಗಳೂರಿನಿಂದ ಲಾಭ ಆಗುವ ಉದ್ದೇಶ ಇಟ್ಟುಕೊಂಡು ಸ್ಥಾನ ನೀಡಲಾಗಿದೆ. ಮಹಿಳೆಯರಿಗೆ ಸ್ಥಾನ ನೀಡಬೇಕು. ಕರಾವಳಿಗೂ ಇನ್ನೂ ಸ್ಥಾನ ನೀಡಬಹುದಿತ್ತು. ಬಲಿಷ್ಠ ಕರ್ನಾಟಕಕ್ಕೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ನೀಟ್ ವ್ಯವಸ್ಥೆಯೇ ಸರಿ ಇಲ್ಲ:

ಸಂವಿಧಾನಾತ್ಮಕ ಹೋರಾಟಗಳು ಸಮಾಜಕ್ಕೆ ಬೇಕು. ಆದರೆ ಹೋರಾಟ ಓರ್ವ ಸಚಿವರನ್ನು ಗುರಿಯಾಗಿಸಿ, ಅವರನ್ನು ಬದಲಾಯಿಸಲು ಮಾತ್ರ ಇರಬಾರದು, ಒಬ್ಬ ಸಚಿವ ಕೆಳಗಿಳಿದರೆ ಮತ್ತೊಬ್ಬ ಬರುತ್ತಾನೆ. ಆದರೆ ವ್ಯವಸ್ಥೆ ಅದೇ ರೀತಿ ಇರುತ್ತದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾತ್ರ ಸಮಸ್ಯೆ ಅಲ್ಲ. ನೀಟ್ ವ್ಯವಸ್ಥೆಯೇ ಸರಿ ಇಲ್ಲ. ಇದನ್ನು ಸರಿಪಡಿಸಲು ಉತ್ತರ ಭಾರತದ ಉದ್ದೇಶ ನೋಡದೇ, ಇಡೀ ಒಕ್ಕೂಟದಂತೆ ನೋಡಿ ಸಿಇಟಿ ತರಹ ನಮಗೆ ನಮ್ಮ ರಾಜ್ಯದಲ್ಲೇ ಆದ್ಯತೆ ನೀಡುವಂತಹ ವ್ಯವಸ್ಥೆ ಮಾಡಬೇಕು ಎಂದರು. 

ಕೆಪಿಎಸ್‌ಸಿಯಲ್ಲೂ ಅವ್ಯವಹಾರ ನಡೆದರೂ, ರಾಜ್ಯ ಸರ್ಕಾರ ಬೇರೆ ಕಡೆಯ ಬಗ್ಗೆ ಮಾತನಾಡುತ್ತಾರೆ. ಆದರೆ ರಾಜ್ಯದ ಅವ್ಯವಸ್ಥೆ ಸರಿಪಡಿಸಲು ನೋಡುತ್ತಿಲ್ಲ. ಅದನ್ನು ಸರಿಪಡಿಸಬೇಕು. ರಾಜ್ಯ ಸರ್ಕಾರ ರೈತರ ಪರ ಎಂದು ರೈತರ ಭೂಮಿ ಕಬಳಿಸುವುದು, ದಲಿತರ ಪರ ಎಂದು ದಲಿತರ ಹಣ ಅನ್ಯ ಉದ್ದೇಶಕ್ಕೆ ಬಳಸುವುದು, ವಿದ್ಯಾರ್ಥಿಗಳ ಪರ ಎಂದು ವಿದ್ಯಾರ್ಥಿಗಳ ಹೋರಾಟಕ್ಕೆ ನ್ಯಾಯ ಕೊಡದೇ ಇರುವುದರ ವಿರುದ್ಧ ನಿರಂತರ ಹೋರಾಟ ಮುಂದುವರಿಯಲಿದೆ ಎಂದು ಚೇತನ್ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article