‘ಯುವಜನತೆ ತಮ್ಮ ಕರ್ತವ್ಯವನ್ನು ಎಂದೂ ಮರೆಯಬಾರದು’: ನಳಿನ್ ಕುಮಾರ್ ಕಟೀಲು

‘ಯುವಜನತೆ ತಮ್ಮ ಕರ್ತವ್ಯವನ್ನು ಎಂದೂ ಮರೆಯಬಾರದು’: ನಳಿನ್ ಕುಮಾರ್ ಕಟೀಲು


ಮಂಗಳೂರು:  ಈ ದೇಶ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ನಮ್ಮ ಜವಾಬ್ದಾರಿಯೂ ಹೆಚ್ಚು ಇದೆ. ಯುವಜನತೆ ತಮ್ಮ ಕರ್ತವ್ಯವನ್ನು ಎಂದೂ ಮರೆಯಬಾರದು ಎಂದು ದ. ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ದೇಶ ಭಕ್ತ ಸಂಘಟನೆ ಮಂಗಳೂರು ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗದ ರಾಜಾಜಿ ಪಾರ್ಕ್ ಬಳಿಯಿಂದ ಪಿವಿಎಸ್ ಬಳಿಯ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಬುಧವಾರ ಸಂಜೆ ನಡೆದ ‘ತಿರಂಗ ಯಾತ್ರೆ’ಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಸಹಸ್ರ ರಾಷ್ಟ್ರ ಭಕ್ತರಿಗೆ ಗೌರವ ಸಲ್ಲಿಸುವ ಕೆಲಸಗಳಾಗಬೇಕು ಎಂಬ ಕಾರಣದಿಂದ ತಿರಂಗ ಯಾತ್ರೆ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿ ತಿರಂಗ ರಾರಾಜಿಸಬೇಕು. ಪ್ರತೀ ವಿದ್ಯಾರ್ಥಿಯ ಕೈಯಲ್ಲಿ ತಿರಂಗ ಇರಬೇಕು. ಪ್ರತೀ ಹೃದಯ, ಮನೆ, ಹಳ್ಳಿಗಳಲ್ಲಿ ರಾಷ್ಟ್ರ ಭಕ್ತಿ ಜಾಗೃತವಾಗಬೇಕು ಎಂದರು.

ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.

ಉಪನ್ಯಾಸ ನೀಡಿದ ಬಿಜೆಪಿ ಮುಖಂಡ, ವಾಗ್ಮಿ ವಿಕಾಸ್ ಪುತ್ತೂರು ಮಾತನಾಡಿ, ಸುಮಾರು 400 ವರ್ಷ ಪರಕೀಯರ ಕೈಯಲ್ಲಿದ್ದ ಭಾರತ ಇಂದು ಸ್ವತಂತ್ರಗೊಂಡಿದೆ. ಇಂದು ಭಾರತ ವಿಶ್ವದಲ್ಲೇ ಮಾದರಿ ಪ್ರಜಾಪ್ರಭುತ್ವವಾಗಿ ಬೆಳೆದು ನಿಂತಿದೆ. ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವ ಸಮೂಹ ಸ್ವಾತಂತ್ರ್ಯಕ್ಕೆ ದೊಡ್ಡ ಅಡಿಪಾಯ ಹಾಕಿತ್ತು ಎಂದರು.

ದೇಶದ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತಾ ಆ ನೆನಪುಗಳನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು. ದೇಶ ಸೇವೆಗೆ ಯುವ ಸಮುದಾಯ ಸದಾ ಕಟಿಬದ್ಧವಾಗಿರಬೇಕು ಎಂದವರು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್ ಕಿಣಿ ಅವರನ್ನು ಸಮ್ಮಾನಿಸಲಾಯಿತು. ಅಲ್ಲದೆ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕಾರ್ಯಕ್ರಮದ ಸಂಚಾಲಕ ಅಶ್ವಿತ್ ಕೊಟ್ಟಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರಮೇಶ್ ಕಂಡೆಟ್ಟು, ಕೆ.ಮೋನಪ್ಪ ಭಂಡಾರಿ, ನಂದನ್ ಮಲ್ಯ, ಮಹೇಶ್ ಜೋಗಿ, ಸುಜಿತ್ ಪ್ರತಾಪ್, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪೂರ್ಣಿಮಾ, ಶಕೀಲಾ ಕಾವ, ಭಾನುಮತಿ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article