ಜಿಲ್ಲೆಯ ನೆಮ್ಮದಿ ಕೆಡಿಸುವ ದುರುದ್ದೇಶದ "ಪುತ್ತೂರು ಚಲೋ"-ಬಿಜೆಪಿಯ ಬೇಜವಾಬ್ದಾರಿ ರಾಜಕಾರಣವನ್ನು ಜನತೆ ಸೋಲಿಸಬೇಕು: ಸಿಪಿಐಎಂ ಮನವಿ
ಮಂಗಳೂರು: ಪುತ್ತೂರಿನ ದರ್ಬೆಯಲ್ಲಿ ಗ್ರಾಹಕರು ಹಾಗೂ ಜೆರಾಕ್ಸ್ ಅಂಗಡಿ ಮಾಲಕರ ನಡುವೆ ನಡೆದ ವಾಗ್ವಾದ, ಜಗಳಕ್ಕೆ ಕೋಮು ಬಣ್ಣವನ್ನು ಹಚ್ಚಿ ಜಿಲ್ಲೆಯ ಸೌಹಾರ್ದ ವಾತಾವರಣವನ್ನು ಕೆಡಿಸಲು ಬಿಜೆಪಿ ಯತ್ನಿಸುತ್ತಿದೆ. ಕೋಮು ಹಿಂಸೆಯ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತಂದಿರುವ ಜಿಲ್ಲಾ ಎಸ್ ಪಿ ಡಾ. ಅರುಣ್ ಅವರನ್ನು ಗುರಿಯಾಗಿಸಿ, ಮತೀಯ ಸಂಘರ್ಷದ ಮೂಲಕ ಜಿಲ್ಲೆಯ ನೆಮ್ಮದಿ ಕೆಡಿಸಿ ಬಿಜೆಪಿಗೆ ರಾಜಕೀಯ ಲಾಭ ಗಳಿಸಿಕೊಡುವ ದುರುದ್ದೇಶದಿಂದ ಸಂಘ ಪರಿವಾರವು "ಪುತ್ತೂರು ಚಲೋ" ಹಮ್ಮಿಕೊಂಡಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಕೋಮು ಸಂಘರ್ಷದ ಚಟುವಟಿಕೆಗಳಿಗೆ ತಡೆ ಬಿದ್ದಿದೆ. ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ. ಜನರು ಒಂದಿಷ್ಟು ನೆಮ್ಮದಿಯಿಂದ ಇದ್ದಾರೆ. ಇದು ಕೋಮುವಾದಿ ಚಟುವಟಿಕೆಗಳನ್ನೆ ಚಾಳಿಯಾಗಿಸಿರುವ, ರಾಜಕೀಯ ಕಾರ್ಯಕ್ರಮ ಮಾಡಿಕೊಂಡಿರುವ, ಚುನಾವಣಾ ಅನುಕೂಲಕ್ಕೆ ಬಳಸುತ್ತಾ ಬಂದಿರುವ ಬಿಜೆಪಿ ಹಾಗು ಸಂಘಪರಿವಾರಕ್ಕೆ ಸಹಿಸಲಾಗುತ್ತಿಲ್ಲ. ಮತೀಯ ಸಂಘರ್ಷ, ಆ ಮೂಲಕ ಹಿಂದು-ಮುಸ್ಲಿಮ್ ಮತೀಯ ದ್ರುವೀಕರಣದ ಅವಕಾಶ ಇಲ್ಲದಿದ್ದಲ್ಲಿ ಚುನಾವಣೆಯಲ್ಲಿ ಹಿನ್ನಡೆ ಆಗುವ ಆತಂಕದಿಂದ ಬಿಜೆಪಿ ಚಡಪಡಿಸುತ್ತಿದೆ. ಮತ್ತೆ ಕೋಮು ಹಿಂಸೆ ಹುಟ್ಟುಹಾಕಲು ಸತತ ಪ್ರಯತ್ನ ಮಾಡುತ್ತಾ ಬರಲಾಗುತ್ತಿದೆ. ಜಿಲ್ಲಾ ಎಸ್ ಪಿ ಡಾ. ಅರುಣ್ ಅವರ ಕಟ್ಟುನಿಟ್ಟಿನ ಕ್ರಮಗಳು ಕೋಮು ಶಕ್ತಿಗಳ ಈ ಎಲ್ಲಾ ಯತ್ನಗಳನ್ನು ವಿಫಲಗೊಳಿಸಿವೆ.
ಈಗ ಪುತ್ತೂರು ದರ್ಬೆಯಲ್ಲಿ ನಡೆದಿರುವ ಸಾಮಾನ್ಯ ಜಗಳ ಒಂದಕ್ಕೆ ಹಿಂದು-ಮುಸ್ಲಿಮ್ ಬಣ್ಣ ಹಚ್ಚಿ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದೆ. ಆ ಮೂಲಕ ಎಸ್.ಪಿ. ಅವರನ್ನು ನೈತಿಕವಾಗಿ ಕುಗ್ಗಿಸುವ, ಬಿಜೆಪಿಗೆ ರಾಜಕೀಯ ಲಾಭ ಮಾಡಿಕೊಡಲು ಸಂಘ ಪರಿವಾರ ಇನ್ನಿಲ್ಲದ ಯತ್ನ ನಡೆಸುತ್ತಿದೆ. ಅದರ ಭಾಗವಾಗಿಯೆ ಎಲ್ಲಾ ಶಕ್ತಿ ಬಳಸಿ "ಪುತ್ತೂರು ಚಲೊ" ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಜನತೆ ಸಂಘಪರಿವಾರ, ಬಿಜೆಪಿಯ ಹುನ್ನಾರಗಳನ್ನು ಅರ್ಥ ಮಾಡಿಕೊಂಡು 'ಪುತ್ತೂರು ಚಲೋ" ದ ದುರುದ್ದೇಶವನ್ನು ವಿಫಲಗೊಳಿಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮನವಿ ಮಾಡಿದೆ.