ಜೀವನ ಶೈಲಿ ಬದಲಾವಣೆಯಿಂದ ಆಹಾರ ಪದ್ಧತಿ ಬದಲಾವಣೆ: ಪ್ರವೀಣ ಅಮ್ಮೆಂಬಳ
ಮಂಗಳೂರು ಗಾಂಧೀ ನಗರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ತುಳು ಸಂಘದ ವತಿಯಿಂದ ಆಟಿದ ಪೊಲಬು ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಆಟಿ (ಆಷಾಢ) ತಿಂಗಳಿಗೆ ಅತ್ಯಂತ ವಿಶೇಷವಾದ ಹಾಗೂ ಮಹತ್ವದ ಸ್ಥಾನವಿದೆ. ಕೃಷಿ ಚಟುವಟಿಕೆಗಳು ಮುಗಿದು ಭಾರಿ ಮಳೆಯಾಗುವ ಈ ಅವಧಿಯಲ್ಲಿ ಪ್ರಕೃತಿಯಲ್ಲಿ ಜೈವಿಕ ಬದಲಾವಣೆಗಳು ಸಂಭವಿಸುತ್ತವೆ. ಮಳೆಗಾಲದ ವಾತಾವರಣದಿಂದಾಗಿ ರೋಗನಿರೋಧಕ ಶಕ್ತಿ ಕ್ಷೀಣಿಸುವ ಈ ಸಮಯದಲ್ಲಿ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಲು ಹಿರಿಯರು ನೈಸರ್ಗಿಕ ಪದ್ಧತಿಗಳನ್ನು ರೂಪಿಸಿದ್ದಾರೆ. ಈ ತಿಂಗಳಲ್ಲಿ ಆಟಿ ಕಳಂಜನ ಮನೆ-ಮನೆಗೆ ಭೇಟಿ, ದುಷ್ಟ ಶಕ್ತಿಗಳ ನಿವಾರಣೆ ಹಾಗೂ ಸಾಂಪ್ರದಾಯಿಕ ಆಚರಣೆಗಳು ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ ಎಂದರು.
ಚಲನಚಿತ್ರ ನಟ, ಜೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಕಲಾವಿದ ಪ್ರವೀಣ್ ಜೈನ್ ಮಾತನಾಡಿ, ಆಟಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ವಿಶಿಷ್ಟ ಮಾಸವಾಗಿದೆ. ಪ್ರಕೃತಿಯೊಂದಿಗೆ ಒಂದಾಗಿ ರೋಗನಿವಾರಕ ಗಿಡಮೂಲಿಕೆಗಳನ್ನು ಬಳಸುವ ಈ ಸಂಪ್ರದಾಯವು ಇಂದಿಗೂ ವೈಜ್ಞಾನಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವ ಪಡೆದುಕೊಂಡಿದೆ. ಇಂತಹ ಕಾರ್ಯಕ್ರಮ ಆರೋಜನೆಯಿಂದ ವಿದ್ಯಾರ್ಥಿಗಳ ಸವಾರ್ಂಗೀಣ ಬೆಳವಣಿಗೆಗೆ ಮತ್ತು ಶೈಕ್ಷಣಿಕ ಜೀವನದ ಯಶಸ್ಸಿ ಕಾರಣವಾಗಲಿದೆ ಎಂದರು.
ಶ್ರೀ ಗೋಕರ್ಣನಾಥೇಶ್ವರ ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಕಾರಂದೂರು ಅಧ್ಯಕ್ಷತೆ ವಹಿಸಿದ್ದರು.
ಶ್ರೀ ವೆಂಕಟೇಶ ಶಿವ ಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಕಾಲೇಜು ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ಪ್ರಾಂಶುಪಾಲ ಡಾ. ಜಯಪ್ರಕಾಶ್, ತುಳುಸಂಘದ ಸಂಯೋಜಕರಾದ ಶ್ರುತಿ ಅಮೀನ್ ಕೆ ಮತ್ತು ಪ್ರತೀಪ್ ಉಪಾಧ್ಯಾಯ, ವಿದ್ಯಾರ್ಥಿ ಸಂಯೋಜಕರಾದ ರಕ್ಷಿತ್ ಮತ್ತು ಸುಪ್ರೀತ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸುಮಿತ್ ಕಾರ್ಯಕ್ರಮ ನಿರೂಪಿಸಿದರು. ಸುಪ್ರೀತ ವಂದಿಸಿದರು.
ಆಟಿ ತಿಂಗಳಲ್ಲಿ ಸಿಗುವ ಪ್ರಕೃತಿಜನ್ಯ ವಸ್ತುಗಳನ್ನು ಬಳಸಿಕೊಂಡು ತಯಾರಿಸುವ ಸಾಂಪ್ರದಾಯಿಕ ತಿಂಡಿ-ತಿನಿಸುಗಳು ಹಾಗೂ ಅವುಗಳ ಆರೋಗ್ಯಕರ ಪ್ರಯೋಜನಗಳ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವ ಕಾರ್ಯವಾಗಬೇಕು. ನಮ್ಮ ಹಿರಿಯರ ಸಂಸ್ಕೃತಿ ಮತ್ತು ವೈಭವೋಪೇತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಉಳಿಸಿ ಬೆಳೆಸುವ ಕಾರ್ಯ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. -ವಸಂತ ಕಾರಂದೂರು, ಸಂಚಾಲಕರು, ಶ್ರೀ ಗೋಕರ್ಣನಾಥೇಶ್ವರ ವಿದ್ಯಾಸಂಸ್ಥೆ