ಆ.21ರಂದು ಮಂಗಳೂರಿನಲ್ಲಿ ಸ್ಟಾರ್ಟ್‌ಅಪ್ ಸಮಾವೇಶ
ಮಂಗಳೂರು: ಕರಾವಳಿ ಕರ್ನಾಟಕದ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ಆ.21ರಂದು ಬೆಳಗ್ಗೆ 9.15ರಿಂದ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ (ಎಂಪಿಸಿ) ರೋಟರಿ ಕೋಸ್ಟಲ್ ಎಂಎಸ್‌ಎಂಇ - ಸ್ಟಾರ್ಟ್‌ಅಪ್ ಕಾಂಕ್ಲೇವ್-2026 ಎಂಬ ಒಂದು ದಿನದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ.
ಮಂಗಳೂರಿನ ಓಲ್ಡ್ ಪೋರ್ಟ್ ರಸ್ತೆಯ ತಾಜ್ ವಿವಾಂತ ಹೋಟೆಲ್ ಎದುರಿನ ರೆಡ್‌ಕ್ರಾಸ್ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಬಾರಿಯ ಸಮಾವೇಶದಲ್ಲಿ ಪ್ರಮುಖ ಉದ್ಯಮಿಗಳು, ನವೋದ್ಯಮಿಗಳು ಸೇರಿದಂತೆ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಂದು ಸಮಾವೇಶದ ನಿರ್ದೇಶಕ ಸಿಎ ಎಸ್.ಎಸ್. ನಾಯಕ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಂತ್ರಜ್ಞಾನ ವಲಯ, ವ್ಯಾಪಾರ, ವಾಣಿಜ್ಯ, ಪ್ರವಾಸೋದ್ಯಮ, ಉತ್ಪಾದನೆ, ಸೇವಾ ವಲಯ ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖರು, ಹೂಡಿಕೆದಾರರು, ಕೈಗಾರಿಕಾ ಮುಖಂಡರು, ನೀತಿ ನಿರೂಪಕರು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಉದ್ಯಮಗಳ ಬೆಳವಣಿಗೆಗೆ ಬ್ಯಾಂಕಿಂಗ್ ವ್ಯವಸ್ಥೆಯ ಬೆಂಬಲ ಅತ್ಯಗತ್ಯವಾಗಿದ್ದು, ಈ ಸಮಾವೇಶಕ್ಕೆ ಕರಾವಳಿಯ ಪ್ರಮುಖ ಬ್ಯಾಂಕ್‌ಗಳು ಹಾಗೂ ಸಂಸ್ಥೆಗಳು ಸಕ್ರಿಯ ಪ್ರಾಯೋಜಕತ್ವ ಮತ್ತು ಬೆಂಬಲವನ್ನು ನೀಡಿವೆ. ಎಂಎಸ್‌ಎಂಇಗಳಿಗೆ ಲಭ್ಯವಿರುವ ವಿವಿಧ ಬ್ಯಾಂಕಿಂಗ್ ಸಾಲ ಸೌಲಭ್ಯಗಳು, ಸಿಬಿಲ್ ಸ್ಕೋರ್ ಸಂಬಂಧಿತ ಸಮಸ್ಯೆಗಳು ಮತ್ತು ಪರಿಹಾರಗಳು, ಕೃಷಿ ಉದ್ಯಮ, ಆಹಾರ ಸಂಸ್ಕರಣೆ ಹಾಗೂ ತಂತ್ರಜ್ಞಾನ ವಲಯಗಳಿಗೆ ಸಂಬಂಧಿಸಿದ ವಿಶೇಷ ಮಾಹಿತಿಯನ್ನು ಅಽವೇಶನದಲ್ಲಿ ನೀಡಲಾಗುತ್ತದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಕಾರ್ಯದರ್ಶಿ ಡಾ.ಪಿ.ಜಿ. ಮಹೇಶ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರವೀಂದ್ರ ಬಿ.ಎನ್., ಕಾರ್ಯದರ್ಶಿ ಜಾಕ್ಸನ್ ಸಲ್ದಾನ, ಕಾರ್ಯಕ್ರಮ ಸಂಯೋಜಕ ಡ್ಯಾರಿಲ್ ಡಿ’ಸೋಜಾ, ರೋಟರಿ ಕ್ಲಬ್‌ನ ಡಾ. ದೇವದಾಸ್ ರೈ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಉಪಸ್ಥಿತರಿದ್ದರು.