ಪುತ್ತೂರು ಚಲೋ ನಡೆಸುವವರು ವಂಚನೆಗೊಳಗಾದ ಯುವತಿಗೆ ನ್ಯಾಯ ಕೊಡಿಸಲಿ: ಪ್ರತಿಭಾ ಕುಳಾಯಿ
ಪುತ್ತೂರು ಚಲೋ ಕಾರ್ಯಕ್ರಮ ಆಯೋಜಿಸಿರುವವರಿಗೆ ನನ್ನನ್ನು ಆಹ್ವಾನಿಸುವ ಯಾವುದೇ ನೈತಿಕತೆ ಇಲ್ಲ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ನಿಂದ ವಂಚನೆಗೊಳಗಾದ ಯುವತಿ ಹಾಗೂ ಆಕೆಯ ಕುಟುಂಬ ಬಿಜೆಪಿ ಮುಖಂಡರ ಮನೆ ಮನೆಗೆ ಅಲೆದಿದ್ದಾರೆ. ಆದರೆ ಆ ಸಂದರ್ಭ ಯಾರೊಬ್ಬರೂ ಅವರಿಗೆ ಬೆಂಬಲ ನೀಡಿಲ್ಲ. ಇದೀಗ ಕೋಮುಗಲಭೆ ಎಬ್ಬಿಸಿ ರಾಜಕೀಯಕ್ಕಾಗಿ ಸಣ್ಣ ವಿಷಯವನ್ನು ಮುಂದೆ ಮಾಡಿರುವ ಬಿಜೆಪಿ ನಾಯಕರಿಗೆ ನನ್ನನ್ನು ಕರೆಯುವ ಯಾವ ನೈತಿಕತೆಯೂ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಪುತ್ತೂರಿನಲ್ಲಿ ಪ್ರತಿಭಟನೆಗೆ ನಾನು ಆಗಮಿಸಲು ಸಿದ್ದ. ಆದರೆ, ಪ್ರತಿಭಟನೆ ಬಳಿಕ ಪ್ರತಿಭಟನಾಕಾರರು ಜಗನ್ನಿವಾಸ್ ಅವರ ಮನೆಗೆ ಬರುವುದಾದರೆ ನಾನು ಪ್ರತಿಭಟನೆಗೆ ಬೆಂಬಲಿಸುತ್ತೇನೆ. ಆ ಪ್ರಕರಣವನ್ನು ಬಗೆಹರಿಸದೆ ನನ್ನ ಬಗ್ಗೆ ಮಾತನಾಡಲು ಯಾರಿಗೂ ಯಾವುದೇ ಹಕ್ಕಿಲ್ಲ. ತಾಯಿಯಾಗುರುವ ಯುವತಿಗೆ ಬಿಜೆಪಿಯವರು ಮದುವೆ ಮಾಡಿಸಬೇಕು, ಆಕೆಗೆ ನ್ಯಾಯ ದೊರೆಯಬೇಕು ಎಂದು ಅವರು ಹೇಳಿದರು.
ಡಿಸಿ ಉದ್ದಟತನದ ವರ್ತನೆ..
ದ.ಕ. ಜಿಲ್ಲಾಧಿಕಾರಿ ಅವರ ಸರಕಾರಿ ನಿವಾಸದಲ್ಲಿ ಅವರ ಪತ್ನಿಯ ಬೋರ್ಡ್ ಹಾಕಿರುವ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದೆ. ಸರಕಾರಿ ನಿವಾಸದಲ್ಲಿ ಸಂಬಂಧಪಡದವರ ಹೆಸರು ಹಾಕುವ ಅಧಿಕಾರ ಇಲ್ಲ. ಜಿಲ್ಲಾಧಿಕಾರಿಗೆ ಆ ನಿವಾಸ ನೀಡಿರುವುದರಿಂದ ಅವರ ಹೆಸರು ಹಾಕಲು ಮಾತ್ರವೇ ಅವಕಾಶವಿದ್ದು, ಪತ್ನಿಯ ಹೆಸರು ಹಾಕುವಂತಿಲ್ಲ. ಜಿಲ್ಲಾಧಿಕಾರಿಗೆ ಕಾನೂನಿನ ಅರಿವು ಇದ್ದು, ಅವರು ತಮ್ಮ ತಪ್ಪನ್ನು ಸರಿಪಡಿಸಬಹುದು ಎಂಬ ಅನಿಸಿಕೆ ಇತ್ತು. ಆದರೆ, ಅವರು ಉದ್ಧಟತನದ ವರ್ತನೆ ತೋರಿಸಿದ್ದಾರೆ. ಡಿಸಿ ಮನೆಯಲ್ಲಿ ಈಜುಕೊಳ ನಿರ್ಮಿಸಿದ್ದಾರೆ. ನಿರ್ಮಿತಿ ಕೇಂದ್ರದಿಂದ ವಿವಿಧ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಎಂಬುದು ತಿಳಿದಿಲ್ಲ. ಈ ಬಗ್ಗೆ ಒಂದು ವಾರ ಕಾಯುತ್ತೇನೆ. ಬಳಿಕ ಕಾನೂನು ಪ್ರಕಾರ ನಾಮಫಲಕ ತೆಗೆಸಲು ಕ್ರಮ ವಹಿಸಲಾಗುವುದು. ಈಗಾಗಲೇ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಮೈಲ್ ಮಾಡಿರುವುದಾಗಿ ಹೇಳಿದರು.