ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಬೈಕ್ ರೈಡರ್‌ನಿಂದ ಯುವತಿಯ ಮೇಲೆ ಅತ್ಯಾಚಾರ
ಮಂಗಳೂರು: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಬೈಕ್ ರೈಡರೊಬ್ಬ ಪ್ರೀತಿಸುವಂತೆ ಒತ್ತಾಯಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಬಳಿಕ ಹಣ ಹಾಗೂ ಐಫೋನ್ ಪಡೆದು ಬ್ಲ್ಯಾಕ್‌ಮೇಲ್ ಮಾಡಿದ್ದಲ್ಲದೆ, ಫೋಟೊ ಹಾಗೂ ವಿಡಿಯೊಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಉಡುಪಿ ಮೂಲದ 27 ವರ್ಷದ ಯುವತಿಯೊಬ್ಬರು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಮರಕಡ, ಬಜಪೆಯ ಬೈಕ್ ರೈಡರ್ ಕಾರ್ತಿಕ್ ಕರ್ಕೇರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 64, 78, 351(2) ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಯುವತಿ 2026ರ ಫೆಬ್ರವರಿಯಲ್ಲಿ ಒಮಾನ್ ನಲ್ಲಿ ಉದ್ಯೋಗದಲ್ಲಿದ್ದಾಗ ಕಾರ್ತಿಕ್ ಕರ್ಕೇರ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದನು. ಪರಿಚಯವಾದ ಕೆಲವೇ ದಿನಗಳಲ್ಲಿ ಆತ ಪ್ರೀತಿಸುವಂತೆ ನಿರಂತರ ಒತ್ತಾಯಿಸುತ್ತಿದ್ದನು. ಬಳಿಕ ಅರೆನಗ್ನ ಫೋಟೊ ಕಳುಹಿಸುವಂತೆ ಕೇಳಿದ್ದರಿಂದ ಆತನೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ ನಂತರ ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಹೇಳಿ ಫೋಟೊ ಕಳುಹಿಸಿದ್ದಲ್ಲದೆ, ತಾನು ಗಾಂಜಾ ಸೇವಿಸುತ್ತೇನೆ ಎಂದು ಹೇಳಿ ಭಯ ಹುಟ್ಟಿಸಿದ್ದರಿಂದ ಅನಿವಾರ್ಯವಾಗಿ ಮತ್ತೆ ಆತನೊಂದಿಗೆ ಸಂಪರ್ಕದಲ್ಲಿರಬೇಕಾಯಿತು ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಒಮಾನ್‌ನಿಂದ ಮಂಗಳೂರಿಗೆ ಮರಳಿದ ಬಳಿಕ ಕಾರ್ತಿಕ್ ಪದೇಪದೇ ಭೇಟಿಯಾಗುವಂತೆ ಒತ್ತಾಯಿಸಿದ್ದನು. ಅದರಂತೆ ಮೇ 10ರಂದು ನಗರದ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಅದೇ ರಾತ್ರಿ ತನ್ನೊಂದಿಗೆ ಉಳಿಯುವಂತೆ ಒತ್ತಾಯಿಸಿದ್ದಲ್ಲದೆ, ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅದೇ ವೇಳೆ ಭಾರತ್ ಮಹಲ್ ಸಮೀಪ ಕಾರ್ತಿಕ್ ಚಲಾಯಿಸುತ್ತಿದ್ದ ಬೈಕ್‌ನ ಅತಿಯಾದ ಶಬ್ದದ ಹಿನ್ನೆಲೆಯಲ್ಲಿ ಪೊಲೀಸರು ವಾಹನ ತಡೆದಿದ್ದರು. ಪೊಲೀಸರು ನಿಲ್ಲಿಸುವಂತೆ ಸೂಚಿಸಿದರೂ ಆತ ವಾಹನ ನಿಲ್ಲಿಸದೆ ತೆರಳಿದ್ದರಿಂದ ಠಾಣೆಗೆ ಕರೆದುಕೊಂಡು ಹೋಗಿ ದಂಡ ವಿಧಿಸಲಾಗಿತ್ತು. ದಂಡ ಪಾವತಿಸಿ ಹೊರಬರುವಾಗ ರಾತ್ರಿ ಸುಮಾರು 1 ಗಂಟೆಯಾಗಿದ್ದರಿಂದ ಲಾಡ್ಜ್‌ನಲ್ಲಿ ಉಳಿಯುವಂತೆ ಒತ್ತಾಯಿಸಿದ್ದನು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಲಾಡ್ಜ್‌ನಲ್ಲಿ ತಾವು ಮದ್ಯ ಸೇವಿಸಿದ್ದನ್ನು ಗಮನಿಸಿ, ನಿದ್ರೆಯಲ್ಲಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ತನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಘಟನೆಯ ಬಳಿಕ ಕಾರ್ತಿಕ್‌ನಿಂದ ದೂರ ಉಳಿದರೂ ಆತ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಕೇಳುತ್ತಿದ್ದನು. ಬಳಿಕ ಮೊಬೈಲ್ ಫೋನ್ ಕೊಡದಿದ್ದರೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕಿದ್ದರಿಂದ ಮೇ 12ರಂದು ಐಫೋನ್ ಖರೀದಿಸಿ ನೀಡಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಾದ ಬಳಿಕವೂ ತನ್ನೊಂದಿಗೆ ಇರಬೇಕೆಂದು ಒತ್ತಾಯಿಸುತ್ತಲೇ ಇದ್ದನು. ಈ ಮಧ್ಯೆ ಯುವತಿಗೆ ಬೇರೆ ವಿವಾಹ ಸಂಬಂಧ ನಿಶ್ಚಯವಾಗಿತ್ತು. ಈ ವಿಷಯ ತಿಳಿಸಿದಾಗ ಮದುವೆಯಾಗಲಿರುವ ಯುವಕನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೂ ನಿಂದನಾತ್ಮಕ ಸಂದೇಶ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕಾನ್ಫರೆನ್ಸ್ ಕರೆ ವೇಳೆ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಳಿಕ ಕಾರ್ತಿಕ್‌ಗೆ ನೀಡಿದ್ದ ಐಫೋನ್ ಅನ್ನು ವಾಪಸ್ ಪಡೆದುಕೊಂಡರೂ ಅದರ ಪಾಸ್‌ವರ್ಡ್ ನೀಡಿರಲಿಲ್ಲ. ಪಾಸ್‌ವರ್ಡ್ ಕೇಳಲು ಕರೆ ಮಾಡಿದಾಗ ಕಾರ್ತಿಕ್‌ನ ಸೋದರ ಸಂಬಂಧಿ ಸುಚಿತ್ರಾ ಕರೆ ಸ್ವೀಕರಿಸಿ, ತನಗೂ ತಾನು ಮದುವೆಯಾಗಲಿರುವ ಯುವಕನಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಳೆ ಎಂದು ಯುವತಿ ಆರೋಪಿಸಿದ್ದಾರೆ.
ಇದಲ್ಲದೆ, ಕಾರ್ತಿಕ್ ವಾಟ್ಸಾಪ್ ಮೂಲಕ ಎರಡು?ಮೂರು ಖಾಸಗಿ ವಿಡಿಯೊ ಹಾಗೂ ಫೋಟೊಗಳನ್ನು ಕಳುಹಿಸಿ, ‘ನೀನು ಹೇಗೆ ಮದುವೆಯಾಗುತ್ತೀಯೋ ನೋಡುತ್ತೇನೆ. ನಿಮ್ಮಿಬ್ಬರನ್ನೂ ಬೇರ್ಪಡಿಸುತ್ತೇನೆ. ಈ ಫೋಟೊಗಳನ್ನು ಪತ್ರಿಕೆಯಲ್ಲಿ ಪ್ರಕಟವಾಗುವಂತೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಕಾರ್ತಿಕ್ ತನ್ನನ್ನು ಹಿಂಬಾಲಿಸಿ ನಿರಂತರ ಕಿರುಕುಳ ನೀಡುತ್ತಿದ್ದು, ತನಗೂ ಹಾಗೂ ತಾನು ಮದುವೆಯಾಗಲಿರುವ ಯುವಕನಿಗೂ ಜೀವ ಬೆದರಿಕೆ ಇದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರ್ತಿಕ್ ನ ಬಂಧನವಾಗಿದೆ.