ಸಾನಿಧ್ಯ ಅರ್ಜುನ್ ಶೆಟ್ಟಿ ಶಾಲೆಯ ಲೋಕಾರ್ಪಣೆ
ಮಂಗಳೂರು: ಅರ್ಜುನ್ ಶೆಟ್ಟಿ ಫೌಂಡೇಶನ್ ಮುಂಬೈ ವತಿಯಿಂದ ಅರ್ಜುನ್ ಎಸ್. ಶೆಟ್ಟಿ ಅವರ ಸ್ಮರಣಾರ್ಥ ಮಾನಸಿಕ ಭಿನ್ನ ಸಾಮಾರ್ಥ್ಯದ ಮಕ್ಕಳಿಗಾಗಿ ನಿರ್ಮಿಸಲಾಗಿರುವ ಸಾನಿಧ್ಯ ಅರ್ಜುನ್ ಶೆಟ್ಟಿ ಶಾಲೆಯನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಉದ್ಘಾಟಿಸಿ ಮಾತನಾಡಿ, ವಿಶೇಷ ಮಕ್ಕಳ ಎಳಿಗೆಗಾಗಿ ಪಕ್ಷ ಬೇಧ ಮರೆತು ಶ್ರಮಿಸುತ್ತೇವೆ. ಕೇಂದ್ರ ಹಾಗೂ ರಾಜ್ಯದಿಂದ ಸಿಗಬಹುದಾದ ಎಲ್ಲಾ ಸೌಕರ್ಯಗಳನ್ನು ವಿಶೇಷ ಮಕ್ಕಳಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿಶೇಷ ಮಕ್ಕಳಿಗೆ ಬೇಕಾದ ಚಿಕಿತ್ಸೆಗೆ ಸಂಬಂಧಿಸಿದಂತೆ ಡಾ. ವಸಂತ ಶೆಟ್ಟಿ ಅವರ ನೇತೃತ್ವದಲ್ಲಿ ಸಮಿತಿ ಸ್ಥಾಪಿಸಿ ಅಗತ್ಯವಿರುವ ಚಿಕಿತ್ಸೆಗಳನ್ನು ಪಟ್ಟಿ ಮಾಡಿ ಸರಕಾರದಿಂದ ಉಚಿತವಾಗಿ ಒದಗಿಸಲು ಕ್ರಮವಹಿಸಲಾಗುವುದು. ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾನವ ಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸಿಎಸ್ ಆರ್ ಅನುದಾನದಲ್ಲಿ ಶೇ. ೨೫ರಷ್ಟಾದರೂ ವಿಶೇಷ ಮಕ್ಕಳ ಸಂಸ್ಥೆಗಳಿಗೆ ಒದಿಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ವಿಶೇಷ ಮಕ್ಕಳಿಗೆ ರಾಜ್ಯದಲ್ಲಿ ಮಿನಿ ಒಲಿಂಪಿಕ್ಸ್ ಆಯೋಜಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಕ್ರೀಡಾ ಸಚಿವರೊಂದಿಗೆ ವಿಷಯ ಪ್ರಸ್ತಾಪಿಸಿದ್ದು, ಅವರಿಂದ ಸಕಾರತ್ಮಕ ಸ್ಪಂದನೆ ಸಿಕ್ಕಿದೆ. ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದರು.
ಸಂಸದ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಅರ್ಜುನ್ ಅವರು ಕೆಲಸ ಮಾಡುತ್ತಿರುವಾಗ ವಿಶೇಷ ಮಕ್ಕಳ ಆರೈಕೆಯ ಚಿಂತನೆ ಹೊಂದಿದ್ದರು. ಅವರ ಕುಟುಂಬಸ್ಥರಿಂದ ಆ ಕನಸು ನನಸಾಗಿದೆ. ಮಂಗಳೂರಿನ ಜನ ಎಷ್ಟೇ ಎತ್ತರಕ್ಕೆ ಏರಿದರೂ ತನ್ನ ಊರನ್ನು ಮರೆಯುವುದಿಲ್ಲ ಎನ್ನುವುದಕ್ಕೆ ಈ ಸೇವೆಯೇ ನಿದರ್ಶನ. ಮಣ್ಣಿನ ಗುಣಕ್ಕೆ ಅನುಗುಣವಾದ ಕಾರ್ಯ ಮಾಡಿ ಅರ್ಜುನ್ ಶೆಟ್ಟಿ ಅವರಿಗೆ ತೃಪ್ತಿ ನೀಡುವ ಕೆಲಸವಾಗಿದೆ. ಸಾನಿಧ್ಯ ಸಂಸ್ಥೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆ ಮಾಡಲು ಶಕ್ತಿಯುತವಾಗಲಿ ಎಂದರು.
ಆಶೀರ್ವಚನ ನೀಡಿದ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು, ಪ್ರತೀ ಕೆಲಸವನ್ನು ದೇವರ ಸೇವೆ ಎಂಬ ಭಾವನೆಯಿಂದ ಮಾಡಬೇಕು. ಭಗವಂತ ಸೇವೆ ಮಾಡಲು ಅವಕಾಶ ನೀಡಿದ್ದಾನೆ ಎಂಬ ಭಾವನೆಯಿಂದ ಕೆಲಸ ಮಾಡಬೇಕು. ತನ್ನಿಂದಾಯಿತು ಎಂಬ ಭಾಗವನೆ ಇದ್ದರೆ ಮಾಡಿದ ಸೇವೆ ಸಾರ್ಥಕವಾಗದು. ಮಹಾಭಾರತದ ಅರ್ಜುನನಂತೆ ಮಂಗಳೂರಿನ ಅರ್ಜುನನೂ ಕೂಡ ಶಾಶ್ವತವಾಗಿ ಉಳಿಯಲಿ ಎಂದರು.
ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ, 2003ರಲ್ಲಿ ಮನೆಯಿಂದ ಇಬ್ಬರು ಮಕ್ಕಳೊಂದಿಗೆ ಪ್ರಾರಂಭವಾದ ಸಾನಿಧ್ಯ ಸೇವೆ ಹಂತ ಹಂತ ಬೆಳೆದು 206 ಮಕ್ಕಳಿಗೆ ಸೇವೆ ನೀಡುತ್ತಿದ್ದೇವೆ. 5ರಿಂದ 46 ವರ್ಷದ ವರೆಗಿನವರು ಸಂಸ್ಥೆಯಲ್ಲಿದ್ದಾರೆ. 79 ಮಂದಿ ಸಿಬಂದಿ ಸೇವೆ ನೀಡುತ್ತಿದ್ದಾರೆ. ಸರಕಾರದ ಅನುದಾನ ಸಮರ್ಪಕವಾಗಿ ಸಿಗದೇ ಇದ್ದರೂ ಸಂಸ್ಥೆ ತನ್ನ ಸೇವೆಯನ್ನು ಅತ್ಯುತ್ತಮ ರೀತಿಯಲ್ಲಿ ನೀಡುತ್ತಿದ್ದೇವೆ. 2019ರಿಂದ ಉಜಿರೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸ್ಕಿಲ್ ಟ್ರೈನಿಂಗ್ ಸೆಂಟರ್ ನಡೆಸಲಾಗುತ್ತಿದೆ ಎಂದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಸಾನಿಧ್ಯ ಸಂಸ್ಥೆಯಲ್ಲಿ ನೈಜ ದೇವರ ಸೇವೆಯಾಗುತ್ತಿದೆ. ಉತ್ಸಾಹಿಶಾಲಿಗಳಾದ ಮನುಷ್ಯರಿಗೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನುವುದಕ್ಕೆ ಸಾನಿಧ್ಯ ಸಾಕ್ಷಿ. ಸೇವೆಯ ಫಲವಾಗಿಯೇ ಸುಧೀರ್ ಶೆಟ್ಟಿ ದಂಪತಿಗಳ ಕೊಡುಗೆಯಲ್ಲಿ ಸಾನಿಧ್ಯ ಅರ್ಜುನ್ ಶೆಟ್ಟಿ ಶಾಲೆ ತಲೆ ಎತ್ತಿದೆ. ಇದು ಅರ್ಥಪೂರ್ಣವಾದ ದೇವರ ಸೇವೆಯಾಗಿದೆ ಎಂದರು.
ಭಿನ್ನ ಸಾಮಾರ್ಥ್ಯದ ಶಾಲೆಯ ಅಧ್ಯಾಪಕರ ಜೀವನಕ್ಕೆ ಭದ್ರತೆ ಇಲ್ಲ. ದೇವರಂತಹ ಮಕ್ಕಳನ್ನು ತಪಸ್ಸಿನ ರೀತಿಯಲ್ಲಿ ಕೆಲಸ ಮಾಡಿ ಇಲ್ಲಿನ ಅಧ್ಯಾಪಕರು ಸಲಹುತ್ತಿದ್ದಾರೆ. ಸರಕಾರ ಅಧ್ಯಾಪಕರ ಕಷ್ಟಕ್ಕೆ ನೆರವಾಗಿ ಸೂಕ್ತ ವೇತನ ನೀಡಲು ಕ್ರಮ ವಹಿಸಬೇಕು ಎಂದರು.
ಅರ್ಜುನ್ ಫೌಂಡೇಶನ್ ಮುಂಬೈನ ಸಿ.ಎ. ಸುಧೀರ್ ಶೆಟ್ಟಿ ಸ್ವಾಗತಿಸಿದರು. ಪ್ರೊ. ರಾಧಾಕೃಷ್ಣ ನಿರೂಪಿಸಿದರು. ಫೌಂಡೇಶನ್ ನ ವಿಜಯ ಎಸ್. ಶೆಟ್ಟಿ, ಕಾಂಚಿ ಮತ್ತು ವೇಣು, ಶ್ರೀ ಗಣೇಶಾ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಖಜಾಂಚಿ ಜಗದೀಶ್ ಶೆಟ್ಟಿ ಮತ್ತಿತರರು ಇದ್ದರು.