ಅಧಿವೇಶನಕ್ಕೆ ಅಡ್ಡಿ ಹಿಂದೆ ಬಿಜೆಪಿ ಹಿಡನ್ ಅಜೆಂಡಾ: ಸಚಿವ ಯು.ಟಿ. ಖಾದರ್ ಆರೋಪ

ಅಧಿವೇಶನಕ್ಕೆ ಅಡ್ಡಿ ಹಿಂದೆ ಬಿಜೆಪಿ ಹಿಡನ್ ಅಜೆಂಡಾ: ಸಚಿವ ಯು.ಟಿ. ಖಾದರ್ ಆರೋಪ


ಮಂಗಳೂರು: ಪ್ರತಿಪಕ್ಷವಾದ ಬಿಜೆಪಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಅಧಿವೇಶನ ನಡೆಸಲು ಅಡ್ಡಿ ಪಡಿಸುವ ಮೂಲಕ ಜನರಿಗೆ ಸಾಮಾಜಿಕ ವಂಚನೆ ಮಾಡುತ್ತಿದ್ದು, ಇದರ ಹಿಂದೆ ಹಿಡನ್ ಅಜೆಂಡಾ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ, ಅತಿವೃಷ್ಟಿಯ ಸಮಸ್ಯೆ ಇದೆ. ಇಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇರುವ ವೇದಿಕೆಗೆ ಅಡ್ಡಿ ಪಡಿಸಿರುವ ಬಿಜೆಪಿಯನ್ನು ಜನತೆ ಕ್ಷಮಿಸುವುದಿಲ್ಲ ಎಂದರು. 

ಸಚಿವ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವ ಕುರಿತು ಪ್ರತಿಪಕ್ಷಕ್ಕೆ ಆಕ್ಷೇಪವಿದ್ದರೆ ಅದರ ಬಗ್ಗೆ ನೋಟೀಸು ನೀಡಿ ಚರ್ಚೆಗೆ ಅವಕಾಶ ಕೋರಬೇಕಿತ್ತು. ಸದನದ ಹೊರಗಡೆ ಈ ಬಗ್ಗೆ ಯಾವುದೇ ರಾಜಕೀಯ ಮಾಡಿದರೂ ಅದನ್ನು ಒಪ್ಪಬಹುದಿತ್ತು. ಆದರೆ, ನಾಗೇಂದ್ರ ಮೇಲಿನ ಆರೋಪದ ಕುರಿತಂತೆ ಈಗಾಗಲೇ ತನಿಖೆ ನಡೆಸಿರುವ ಸಂಸ್ಥೆ ಕ್ಲೀನ್ ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಸಚಿವ ಸ್ಥಾನವನ್ನು ನೀಡಲಾಗಿದೆ. ಅದಕ್ಕೆ ಅವಕಾಶ ಇಲ್ಲವೆಂದಾಗಿದ್ದರೆ ರಾಜ್ಯಪಾಲರು ಪ್ರತಿಜ್ಞೆಯನ್ನು ಬೋಧಸುತ್ತಿದ್ದರೇ? ರಾಜ್ಯಪಾಲರಿಗೆ ಕಾನೂನಿನ ಅರಿವಿಲ್ಲವೇ ಅಥವಾ ಅವರಲ್ಲಿ ಕಾನೂನು ತಂಡ ಇಲ್ಲವೇ ಎಂದು ಪ್ರಶ್ನಿಸಿದರು. ನಾಗೇಂದ್ರ ಅವರ ಮೇಲೆ ಆರೋಪ ಬಂದಾಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಮಾರು ಒಂದೂವರೆ ವರ್ಷ ಕಾಲ ಸಂಪುಟದಿಂದ ಹೊರಗಿದ್ದರು. ವಂಚನೆಯಾಗಿದ್ದ ೧೮೦ ಕೋಟಿ ರೂ.ನಲ್ಲಿ ಶೇ. ೯೯.೫ರಷ್ಟು ಹಣ ಸರಕಾರಕ್ಕೆ ವಾಪಾಸಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಿದೆ. ಇದೀಗ ಸಿಬಿಐ ನೋಟೀಸು ನೀಡಿದೆ ಎಂಬ ಕಾರಣಕ್ಕೆ ಯಾರೂ ತಪ್ಪಿತಸ್ಥ ಎಂದು ಸಾಬೀತಾಗುವುದಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು. ಹಾಗೆ ಸಿಬಿಐ ನೋಟೀಸು ನೀಡಿದೆ ಎಂಬ ಕಾರಣಕ್ಕೆ ರಾಜೀನಾಮೆ ನೀಡುವುದಾದರೆ, ಬಿಜೆಪಿಯ ಅದೆಷ್ಟೋ ಮುಖ್ಯಮಂತ್ರಿ, ಸಚಿವರು ಇಂತಹ ತನಿಖೆಯನ್ನು ಎದುರಿಸುತ್ತಿದ್ದಾರೆ. ಅವರ ರಾಜೀನಾಮೆಗೆ ಒತ್ತಾಯಿಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರಿಗೊಂದು ನ್ಯಾಯ, ನಾಗೇಂದ್ರ ಅವರಿಗೊಂದು ನ್ಯಾಯ ಹೇಗಾಗುತ್ತದೆ ಎಂದರು. 

ಅಧಿವೇಶನದ ಹೊರಗಡೆ ಪ್ರತಿಪಕ್ಷವು ಪಾದಯಾತ್ರೆ ಅಥವಾ ಯಾವುದೇ ರೀತಿಯ ರಾಜಕೀಯ ಮಾಡುವುದಕ್ಕೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಜನರ ಸಮಸ್ಯೆಗಳ ಚರ್ಚೆಯಾಗುವ ಅಧಿವೇಶನವನ್ನು ಅಡ್ಡಿಪಡಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಹೇಳಿದ ಸಚಿವ ಯು.ಟಿ.ಖಾದರ್, ಸಂಸತ್ತಿನಲ್ಲಿ ಪ್ರತಿಪಕ್ಷದವರು ನೀಟ್ ಹಗರಣಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಸಿದ ಮಕ್ಕಳ ಮೇಲಿನ ದೌರ್ಜನ್ಯ, ಹಲ್ಲೆಗೆ ಸಂಬಂಧಿಸಿ ಪ್ರತಿಭಟನೆ ನಡೆಸಿರುವುದಕ್ಕೆ ಪ್ರತಿಯಾಗಿ ಇಲ್ಲಿ ಅಡ್ಡಿ ಪಡಿಸಲಾಗುತ್ತಿದೆಯೇ ವಿನಃ, ಸಚಿವ ನಾಗೇಂದ್ರ ಕಾರಣ ಅಲ್ಲ ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸಲಿ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article