ಪಾನ್ ಮಸಾಲ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ತೊಂದರೆ ಇಲ್ಲ: ಸಚಿವ ಯು.ಟಿ. ಖಾದರ್

ಪಾನ್ ಮಸಾಲ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ತೊಂದರೆ ಇಲ್ಲ: ಸಚಿವ ಯು.ಟಿ. ಖಾದರ್


ಮಂಗಳೂರು: ಪಾನ್ ಮಸಾಲದಲ್ಲಿ ನಿಕೋಟಿನ್, ತಂಬಾಕು ಹಾಗೂ ಗುಟ್ಕಾ ಮಿಶ್ರಣ ಮಾಡಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಶುದ್ಧ ಪಾನ್ ಮಸಾಲ ಪ್ರತ್ಯೇಕವಾಗಿ ಬಂದರೆ ಯಾವುದೇ ತೊಂದರೆ ಇಲ್ಲ. ಈ ಕ್ರಮದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.

ನೆಹರೂ ಮೈದಾನದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

2014ರಲ್ಲಿ ನಾನು ಗುಟ್ಕಾ ನಿಷೇಧಿಸಿದಾಗಲೂ ಅಡಿಕೆ ಬೆಲೆ ಇಳಿಕೆಯಾಗಲಿದೆ ಎಂದು ಅಪಪ್ರಚಾರ ಮಾಡಲಾಗಿತ್ತು. ಆದರೆ ಆ ಬಳಿಕ ಅಡಿಕೆ ಧಾರಣೆ ಜಾಸ್ತಿಯಾಯಿತೇ ಹೊರತು ಕಡಿಮೆಯಾಗಲಿಲ್ಲ. ಈಗಲೂ ಅಡಿಕೆ ಬೆಳೆಗಾರರಿಗೆ ಅಥವಾ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು. 

ಇದೇ ವೇಳೆ, ಸಿಗರೇಟ್ ಲಾಬಿಗೆ ಸರಕಾರ ಮಣಿದಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, ಉತ್ತಮ ಆರೋಗ್ಯದ ಉದ್ದೇಶದಿಂದ ತಂದಿರುವ ನಿರ್ಧಾರಗಳ ಮೇಲೆ ರಾಜಕೀಯ ಆರೋಪ ಮಾಡುವುದು ಸರಿಯಲ್ಲ. ಗುಟ್ಕಾ ಮತ್ತು ಪಾನ್ ಮಸಾಲ ಕಂಪನಿಗಳ ಲಾಬಿಗೆ ಮಣಿದು ಯಾರು ಸಂಚಲನ ಸೃಷ್ಟಿಸುತ್ತಿದ್ದಾರೆ ಎಂಬುದು ಜನರಿಗೆ ತಿಳಿದಿದೆ ಎಂದು ತಿರುಗೇಟು ನೀಡಿದರು.

ಧಾರ್ಮಿಕ ಸಭೆ-ಸಮಾರಂಭಗಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಮಾತನಾಡುತ್ತಾ, ಸಂವಿಧಾನ ಮತ್ತು ಕಾನೂನಿಗೆ ಅನುಗುಣವಾಗಿ ಸರಕಾರ ತೀರ್ಮಾನ ಕೈಗೊಳ್ಳಲಿದೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ, ವಿರೋಧ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ ಎಲ್ಲರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article