ಝಮೀರ್ ಅಹ್ಮದ್‌ರ ದೇಶಪ್ರೇಮ ಯಾರೂ ಪ್ರಶ್ನಿಸುವಂತಿಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ನೆಹರೂ ಮೈದಾನದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ ಅವರು, ಝಮೀರ್ ಅಹ್ಮದ್ ಖಾನ್ ದೇಶದ ಅತ್ಯಂತ ಸತ್ಪ್ರಜೆಯಾಗಿದ್ದು, ಎಲ್ಲಾ ಸಂದರ್ಭದಲ್ಲೂ ಸೌಹಾರ್ದತೆ ಮತ್ತು ದೇಶಪ್ರೇಮವನ್ನು ಎತ್ತಿಹಿಡಿದಿದ್ದಾರೆ. ಕೆಲವೊಂದು ಕಾರಣಗಳಿಂದ ಅವರಿಗೆ ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ ಪತ್ರವನ್ನು ಬರೆದಿದ್ದಾರೆ. ಆ ಪತ್ರದ ಹಿಂದಿರುವ ಭಾವನೆ ಮತ್ತು ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ಆ ಪತ್ರದಲ್ಲಿರುವ ಒಂದೆರಡು ಶಬ್ದಗಳನ್ನು ಹಿಡಿದುಕೊಂಡು ಅಪಾರ್ಥ ಕಲ್ಪಿಸಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಸರ್ಕಾರ ಅವರ ಪತ್ರವನ್ನು ಒಪ್ಪಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿದುಕೊಂಡೇ ಅವರನ್ನು ನಿಯೋಜಿಸಲಾಗಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಅವರಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಪತ್ರ ಬರೆದಿದ್ದಾರೆ. ಇದನ್ನೇ ದೊಡ್ಡದು ಮಾಡಿ ರಾಜಕೀಯ ಮಾಡುವುದು ಬೇಡ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ದೇಶದ ಸರ್ವರಿಗೂ ದೇಶಪ್ರೇಮವಿದೆ ಎಂದರು.
ಖಾತೆ ಹಂಚಿಕೆ ಅಥವಾ ಮಂತ್ರಿ ಸ್ಥಾನದ ಅಸಮಾಧಾನದಿಂದಲೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು, ಎಐಸಿಸಿ ಅಧ್ಯಕ್ಷರು ಮತ್ತು ಮುಖಂಡರು ನಮ್ಮೆಲ್ಲರ ಜೊತೆ ಚರ್ಚೆ ಮಾಡಿಯೇ ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಎಲ್ಲಾ ನಾಯಕರ ಒಪ್ಪಿಗೆಗೆ ಅನುಗುಣವಾಗಿಯೇ ನಡೆದಿದೆ. ನಮ್ಮಲ್ಲಿ ಯಾವುದೇ ಅಪಸ್ವರಗಳಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಖಾದರ್ ತಿಳಿಸಿದರು.