ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಸಂಭ್ರಮ
ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ 23ನೇ ವಾರ್ಷಿಕ ಸಂಭ್ರಮ ಆ.11 ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ.
ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ನೆಂಪು ಕಾರ್ಯಕ್ರಮ ಹಾಗೂ ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಮೋಹನ ಆಳ್ವ ದೀಪ ಪ್ರಜ್ವಲನಗೊಳಿಸಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಹಿರಿಯ ನಾಟಕಕಾರ ತಮ್ಮ ಲಕ್ಷ್ಮಣ ಅವರಿಗೆ ತೌಳವ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ನವಚೇತನ ಚಿಟ್ಸ್ ಅಂಡ್ ಫೈನಾನ್ಸ್ ಎಂಡಿ ಲೋಕೇಶ್ ಶೆಟ್ಟಿ ಮತ್ತು ಕೆಎಸ್‌ಆರ್‌ಟಿಸಿ ಡಿಸಿ ರಾಜೇಶ್ ಶೆಟ್ಟಿ ಹಿರಿಯ ಕಲಾವಿದರಾದ ತಿಮ್ಮಪ್ಪ ಶೆಟ್ಟಿ ಬೋಳಾರ, ನಾಗೇಶ್ ಸಾಲಿಯಾನ್ ಕಂಕನಾಡಿ, ವಿಶ್ವನಾಥ ಚಿತ್ರಾಪುರ, ದಿನೇಶ್ ಮಾಸ್ಟರ್ ಬಿಜೈ, ಉಲ್ಲಾಸ್ ಕದ್ರಿ, ಸುಜಾತ ಶಕ್ತಿನಗರ ಇವರನ್ನು ಸನ್ಮಾನಿಸುವರು. ಭಾರತೀಯ ತೀಯ ಸಮಾಜ ಉಳ್ಳಾಲ ಇದರ ಅಧ್ಯಕ್ಷ ಜಯಂತ್ ಕೊಂಡಾಣ ಮತ್ತು ಸಾಮಾಜಿಕ ಕಾರ್ಯಕರ್ತ ಜಯಕೃಷ್ಣ ಬಿ.ಕೋಟ್ಯಾನ್ ಸ್ಮರಣ ಸಂಚಿಕೆ ಅನಾವರಣಗೊಳಿಸುವರು. ಹಿರಿಯ ನಾಟಕಕಾರ ಡಾ.ಪಿ.ಸಂಜೀವ ದಂಡಕೇರಿ ಅವರು ಅಶಕ್ತ ಕಲಾವಿದರಾದ ದಿ.ಬಾಬು ಭಟ್ ಶರವು, ದಿ.ದಯಾನಂದ ಶರವು, ದಿ.ವಿ.ಜಿ.ಪಾಲ್ ಬೊಕ್ಕಪಟ್ಣ, ದಿ.ಸೀತಾರಾಮ ಶೆಟ್ಟಿ ಪಚ್ಚನಾಡಿ ಇವರ ಕುಟುಂಬಕ್ಕೆ ಗೌರವಧನ ವಿತರಿಸುವರು ಎಂದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಸುಗಮ ಸಂಗೀತ, ಸಂಜೆ 6ರಿಂದ ನಮ್ಮ ಕಲಾವಿದೆರ್ ಬೆದ್ರ ಇವರಿಂದ ‘ವೈರಲ್ ವೈಶಾಲಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
2003ರಿಂದ ತುಳು ನಾಟಕ ಕಲಾವಿದರ ಒಕ್ಕೂಟ ತುಳು ನಾಟಕಕರ್ತರು, ನಾಟಕ ನಿರ್ದೇಶಕರು, ಕಲಾವಿದರು, ಕಲಾವಿದೆಯರು, ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರು, ಗಾಯಕಿಯರು,
ರಂಗಸಜ್ಜಿಕೆಯವರು, ಧ್ವನಿ ಮತ್ತು ಬೆಳಕು, ಪ್ರಸಾದನ, ಹಿನ್ನೆಲೆ ಬೋಧಕರು, ವೇಷಭೂಷಣದವರು ಸೇರಿ 12 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದೆ ಎಂದರು.
2009ರಲ್ಲಿ ತುಳು ನಾಟಕ ಕಲಾವಿದರ ಕ್ಷೇಮ ನಿಧಿಯನ್ನು ಸ್ಥಾಪಿಸಿ ಆ ಮೂಲಕ ಆರ್ಥಿಕವಾಗಿ ಅಶಕ್ತರಾಗಿರುವ ಕಲಾವಿದರಿಗೆ ಸಹಾಯಹಸ್ತ ನೀಡಲಾಗುತ್ತಿದೆ. ತುಳು ನಾಟಕ ರಂಗದ ಕಲಾವಿದರಿಗೆ ಸಮೂಹ ವೈದ್ಯಕೀಯ ವಿಮೆ, ಅಶಕ್ತ ಕಲಾವಿದರಿಗೆ ವೈದ್ಯಕೀಯ ಕ್ಷೇಮ ನಿಧಿಯಿಂದಲೇ ವಿಮಾ ಕಂತು ಪಾವತಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕೊಡಮಾಡುವ ಕಲಾವಿದರ
ಅಪಘಾತ ವಿಮಾ ಸೌಲಭ್ಯವನ್ನು ನಾಟಕ ಕಲಾವಿದರಿಗೂ ವಿಸ್ತರಿಸಲಾಗಿದ್ದು, 600ಕ್ಕೂ ಅಧಿಕ ಮಂದಿ ಕಲಾವಿದರಿಗೆ ಈ ಸೌಲಭ್ಯ ಒದಗಿಸಲಾಗಿದೆ. ತುಳು ನಾಟಕ ರಂಗದ ಕೀರ್ತಿಶೇಷ ಕಲಾವಿದರ
ಹೆಸರಲ್ಲಿ ಕಲಾವಿದರನ್ನು ಸನ್ಮಾನಿಸಲು ಕುಟುಂಬ ಸದಸ್ಯರಿಂದ ಪ್ರಾಯೋಜಕತ್ವ ಪಡೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಕೋಶಾಧಿಕಾರಿ ಮೋಹನ ಕೊಪ್ಪಲ, ಉಪಾಧ್ಯಕ್ಷರಾದ ಗೋಕುಲ್ ಕದ್ರಿ, ತಾರಾನಾಥ ಶೆಟ್ಟಿ ಬೋಳಾರ್, ತುಳಸಿದಾಸ್ ಉರ್ವ ಇದ್ದರು.