ಬಿಜೆಪಿ ವಂದೇ ಮಾತರಂ ಹಾಡನ್ನು ರಾಜಕೀಯಗೊಳಿಸುತ್ತಿರುವುದು ಖಂಡನೀಯ: ಹರೀಶ್ ಕುಮಾರ್
ವಂದೇ ಮಾತರಂ ಕುರಿತು ಕಾಂಗ್ರೆಸ್‌ಗೆ ಬುದ್ಧಿ ಹೇಳುವ ಮೊದಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ. ಆರ್‌ಎಸ್‌ಎಸ್ ಕಚೇರಿಗಳಲ್ಲಿ ವಂದೇ ಮಾತರಂ ಹಾಡಲಾಗುತ್ತದೆಯೇ? ದೇಶದ ತ್ರಿವರ್ಣ ಧ್ವಜದ ಬಗ್ಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ನಿಜವಾದ ಗೌರವವಿದ್ದರೆ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ನಿಯಮಿತವಾಗಿ ಹಾರಿಸಲು ಪ್ರಾರಂಭಿಸಿದ ದಿನವನ್ನು ತಿಳಿಸಲಿ.
ಸಂಘ ಗೀತೆಗೆ ಮಾತ್ರ ಸೀಮಿತವಾಗದೆ ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಗೀತೆಗಳಿಗೆ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಂಡು ನಂತರ ಕಾಂಗ್ರೆಸ್‌ಗೆ ದೇಶಭಕ್ತಿಯ ಪಾಠ ಹೇಳಲು ಬರಲಿ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಅಥವಾ ಜನಸಂಘದವರು ವಹಿಸಿದ ಪಾತ್ರವೇನು ಎಂಬುದನ್ನು ಬಿಜೆಪಿ ಮೊದಲು ದೇಶದ ಮುಂದೆ ಸ್ಪಷ್ಟಪಡಿಸಲಿ. ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‌ಎಸ್ ಅಥವಾ ಜನಸಂಘದ ಒಬ್ಬರಾದರೂ ಪ್ರಾಣತ್ಯಾಗ ಮಾಡಿದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ.
ಶಿಕ್ಷಣವನ್ನು ಕೇಸರೀಕರಣಗೊಳಿಸಿದವರು, ದೇಶದ ಪ್ರಧಾನಿಗಳು ದಶಕಗಳ ಕಾಲ ನಿರ್ಮಿಸಿದ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಿದವರು ಹಾಗೂ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿರುವವರು ಕಾಂಗ್ರೆಸ್‌ಗೆ ದೇಶಭಕ್ತಿ ಮತ್ತು ಇತಿಹಾಸದ ಪಾಠ ಹೇಳುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಹಾಗೂ ಸಂವಿಧಾನದ ಮೌಲ್ಯಗಳನ್ನು ಗೌರವಿಸಿಕೊಂಡು ಮುನ್ನಡೆಯುತ್ತಿದೆ. ದೇಶದ ಏಕತೆ, ಸಾರ್ವಭೌಮತೆ ಮತ್ತು ಜಾತ್ಯತೀತ ಆಶಯಗಳನ್ನು ಕಾಪಾಡುವುದು ಕಾಂಗ್ರೆಸ್ ನ ಬದ್ಧತೆಯಾಗಿದೆ ಎಂದು ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.