ಶ್ವಾಸಕೋಶದ ಕ್ಯಾನ್ಸರ್ ತಡೆಯಲು ಜಾಗೃತಿ ಅಗತ್ಯ: ಡಾ. ಎಲ್ರಾಯ್ ಸಲ್ದಾನಾ

ಶ್ವಾಸಕೋಶದ ಕ್ಯಾನ್ಸರ್ ತಡೆಯಲು ಜಾಗೃತಿ ಅಗತ್ಯ: ಡಾ. ಎಲ್ರಾಯ್ ಸಲ್ದಾನಾ


ಮಂಗಳೂರು: ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬಹಳ ಸಾಮಾನ್ಯವಾಗಿದ್ದು, ಅರಿವಿನ ಕೊರತೆಯಿಂದಾಗಿ ಹೆಚ್ಚು ಜನರು ಈ ಮಾರಕ ಖಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಕ್ಯಾನ್ಸರ್ ವೈದ್ಯ ಡಾ. ಎಲ್ರಾಯ್ ಸಲ್ಡಾನಾ ಹೇಳಿದರು.


ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ತುಂಬೆ ಹಾಗೂ ವಿವಿ ಕಾಲೇಜಿನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಐಐಸಿ, ಐಕ್ಯುಎಸಿ ಸಹಯೋಗದಲ್ಲಿ ಶಿವರಾಮ ಕಾರಂತ ಸಭಾಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 


ಯುರೋಪ್, ಅಮೆರಿಕಾದಂತಹಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಂತಹಾ ಅಭಿವೃದ್ಧಿಶೀಲ ದೇಶಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಪೀಡಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಹೆಚ್ಚಿದ್ದು, ಕ್ಯಾನ್ಸರ್ ಖಾಯಿಲೆಯ ಪ್ರಾರಂಭದ ಹಂತದಲ್ಲೇ ಸೂಕ್ತ ಚಿಕಿತ್ಸೆ ಒದಗಿಸಿದರೆ ಈ ಮಾರಕ ಖಾಯಿಲೆಯನ್ನು ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು. 


ಸಿಗರೇಟು, ತಂಬಾಕು ಉತ್ಪನ್ನಗಳ ಸೇವನೆ, ವಾಯು ಮಾಲಿನ್ಯ, ಪರಿಸರ ಮಾಲಿನ್ಯ, ವಂಶಪಾರಂಪರ್ಯ ಹಾಗೂ ಆಹಾರಕ್ರಮದಲ್ಲಿನ ಲೋಪದಿಂದಾಗಿ ಕ್ಯಾನ್ಸರ್ ಉಲ್ಬಣಿಸುವ ಸಾಧ್ಯತೆಯಿದ್ದು, ಜನಸಾಮಾನ್ಯರು ಈ ಕುರಿತು ಹೆಚ್ಚಿನ ಜಾಗ್ರತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಜಯವಂತ ನಾಯ್ಕ್ ಅವರು, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಖಾಯಿಲೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯವಿರುವುದರಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಿಸಿ ಎಂದರು.

ವೇದಿಕೆಯಲ್ಲಿ ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವಯಸ್ಕ ಆರೋಗ್ಯ ಶುಶ್ರೂಷಕ ವಿಭಾಗದ ಮುಖ್ಯಸ್ಥ ಡಾ. ಪದ್ಮಕುಮಾರ್ ಎಸ್, ವಿವಿ ಕಾಲೇಜಿನ ಸೂಕ್ಷ್ಮಾಣುಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್, ಐಐಸಿ ಸಂಯೋಜಕರು ಹಾಗೂ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ, ಐಐಸಿ ಅಧ್ಯಕ್ಷರು ಹಾಗೂ ಗಣಕವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕಿ ಡಾ. ಭಾರತಿ ಪಿಲರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಭಾಗವಾಗಿ ಶ್ವಾಸಕೋಶ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ನಾಟಕ ಪ್ರದರ್ಶಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article