ಇ.ವಿ. ಆಟೋರಿಕ್ಷಾ; ವಲಯ ವಿಂಗಡನೆ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಮಂಗಳೂರು: ಇ.ವಿ. (ಇಲೆಕ್ಟ್ರಿಕ್ ವೆಹಿಕಲ್) ಆಟೋರಿಕ್ಷಾಗಳಿಗೆ ಪರ್ಮಿಟ್ ವಿತರಣೆ ಹಾಗೂ ವಲಯಗಳ ವಿಂಗಡಣೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಬಗೆಹರಿಸಬೇಕು ಎಂದು ಇ.ವಿ. ಆಟೋರಿಕ್ಷಾ ಚಾಲಕ-ಮಾಲಕರ ಸಂಘಟನೆ ಒತ್ತಾಯಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಗ್ರೀನ್ ಸಿಟಿ ಇದರ ನಿಕಟಪೂರ್ವ ಅಧ್ಯಕ್ಷ ಪ್ರಜೇಶ್, 2025 ಅಕ್ಟೋಬರ್ 30ರೊಳಗೆ ಬಂದಿರುವ ಎಲ್ಲಾ ಇವಿ ಆಟೋಗಳಿಗೆ ಮಂಗಳೂರು ನಗರದಲ್ಲಿ ಸಂಚರಿಸಲು ಪರ್ಮಿಟ್ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಗ್ರಾಮಾಂತರ ವಿಳಾಸ ಹೊಂದಿರುವ ಹಾಗೂ ಮಹಿಳೆಯರ ಹೆಸರಿನಲ್ಲಿರುವ ಹಲವು ವಾಹನಗಳ ಪರ್ಮಿಟ್‌ಗಳನ್ನು ಬಾಕಿ ಇರಿಸಿದ್ದು, ಇದೀಗ ಗ್ರಾಮಾಂತರ ಪರ್ಮಿಟ್ ನೀಡಿ ಕೋರ್ಟ್ ಆದೇಶ ಬರುವವರೆಗೆ ಮಂಗಳೂರು ನಗರದಲ್ಲಿ ಸಂಚರಿಸಬಹುದು ಎಂಬ ಮುದ್ರೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಸಾಲ ಮಾಡಿ, ಚಿನ್ನಾಭರಣ ಅಡಮಾನವಿಟ್ಟು ಹಲವರು ಇವಿ ಆಟೋ ಖರೀದಿಸಿ ಮಂಗಳೂರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪದೇಪದೇ ನಿಯಮ ಬದಲಿಸುವ ಮೂಲಕ ಚಾಲಕರ ಬದುಕಿನೊಂದಿಗೆ ಅಧಿಕಾರಿಗಳು ಆಟವಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇವಿ ಆಟೋಗಳಿಗೆ ಮಾತ್ರ ಅದರ ಮಾಲಕರೇ ಚಲಾಯಿಸಬೇಕು ಎಂಬ ನಿಯಮ ವಿಧಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಇದೇ ನಿಯಮ ಸಿಎನ್‌ಜಿ ಹಾಗೂ ಎಲ್‌ಪಿಜಿ ಆಟೋಗಳಿಗೆ ಯಾಕೆ ಅನ್ವಯಿಸಿಲ್ಲ ಎಂದವರು ಪ್ರಶ್ನಿಸಿದರು.
ಚಾಲಕರ ಸಿಬಿಎಲ್ ಸ್ಕೋರ್ ಕಡಿಮೆ ಇರುವ ಕಾರಣ ಅವರು ಪತ್ನಿಯೋ, ತಾಯಿಯೋ, ಸಹೋದರ, ಸಹೋದರಿಯರ ಹೆಸರಿನಲ್ಲಿ ಆಟೋ ಖರೀದಿಸಿದ್ದಾರೆ. ಇದೀಗ ಆಟೋ ಯಾರ ಹೆಸರಿನಲ್ಲಿದೆ ಅವರೇ ಓಡಿಸಬೇಕೆನ್ನುತ್ತಿದ್ದಾರೆ. ಇದು ಸಾಧ್ಯವೇ ಎಂದು ಪ್ರಜೇಶ್ ಅಳಲು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಟೀಂ ಗ್ರೀನ್ ಸಿಟಿ ಅಧ್ಯಕ್ಷ ಮೋಹನ್‌ದಾಸ್, ಸಂಘಟನೆಯ ಕಿರಣ್ ಸಿ.ಕೆ., ಕ್ಲೆಮೆಂಟ್ ಡಿ’ಸೋಜಾ, ಮೈಕಲ್, ಮಹೇಂದ್ರ ಕುಮಾರ್, ಪವನ್ ಕುಮಾರ್, ರಾಮ ದೇವಾಡಿಗ, ರಾಧಾಕೃಷ್ಣ ಉಪಸ್ಥಿತರಿದ್ದರು.