ಪಾದಚಾರಿಗಳ ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ವಿಶೇಷ ಕಾರ್ಯಾಚರಣೆ
ಈ ನಿಟ್ಟಿನಲ್ಲಿ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ನೋ ಪಾರ್ಕಿಂಗ್, ಫುಟ್ಪಾಟ್ ಪಾರ್ಕಿಂಗ್, ಅನಧಿಕೃತ ಪಾರ್ಕಿಂಗ್, ಎರಡುಕಡೆ ಪಾರ್ಕಿಂಗ್, ಸಾರಿಗೆಗೆ ಅಡೆಚಣೆ ಹಾಗೂ ಇತರೆ ಪಾರ್ಕಿಂಗ್ ನಿಯಮ ಉಲ್ಲಂಘನೆಗಳ ವಿರುದ್ಧ ಜೂನ್ 2026 ರಿಂದ ಈವರೆಗೆ ಒಟ್ಟು 7,490 ಪ್ರಕರಣಗಳನ್ನು ದಾಖಲಿಸಿ, 3,07,600 ರೂ. ದಂಡವನ್ನು ವಸೂಲಿ ಮಾಡಲಾಗಿದೆ. ಇದರಲ್ಲಿ 1080 ಫುಟ್ಪಾತ್ ಪ್ರಕರಣಗಳು ಒಳಗೊಂಡಿವೆ.
ಮಾತ್ರವಲ್ಲ ನಕಲಿ ಹಾಗೂ ದೋಷಪೂರಿತ ನಂಬರ್ ಪ್ಲೇಟ್ಗಳನ್ನು ಬಳಸಿಕೊಂಡು ಸಂಚರಿಸುವುದು ಮತ್ತು ಅವುಗಳ ಮೂಲಕ ಅಪರಾಧ ಕೃತ್ಯಗಳನ್ನು ಎಸಗುವುದನ್ನು ತಡೆಗಟ್ಟುವ ಉದ್ದೇಶದಿಂದ, ಆ.4 ರಿಂದ 12 ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ 258 ವಾಹನಗಳ ವಿರುದ್ಧ, ನಂಬರ್ ಪ್ಲೇಟ್ ಅಳವಡಿಸದೇ ಸಂಚರಿಸುತ್ತಿದ್ದ 74 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 332 ಪ್ರಕರಣಗಳನ್ನು ದಾಖಲಿಸಿ, 3,01,000 ರೂ. ದಂಡವನ್ನು ವಿಧಿಸಲಾಗಿದೆ.
ನಂಬರ್ ಪ್ಲೇಟ್ಗಳನ್ನು ಸ್ಪಷ್ಟವಾಗಿ, ನಿಯಮಾನುಸಾರ ಹಾಗೂ ವಾಹನಕ್ಕೆ ನಿಗದಿಪಡಿಸಿದ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ವಾಹನ ಮಾಲೀಕರ ಜವಾಬ್ದಾರಿಯಾಗಿದೆ. ಅದುದ್ದರಿಂದ ನಿಗದಿ ಪಡಿಸಿರುವ ಹೆಚ್.ಎಸ್.ಅರ್.ಪಿ. ನಂಬ್ರ ಪ್ಲೇಟ್ಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.
ಮಂಗಳೂರು ನಗರ ಪೊಲೀಸ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಈ ವಿಶೇಷ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದ್ದು, ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತ ಸಂಚಾರಕ್ಕೆ ಸಹಕರಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.