ಘನತ್ಯಾಜ್ಯ ವಿಲೇವಾರಿ, ಸ್ವಚ್ಛತೆ, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಆದ್ಯತೆ: ರಾಹುಲ್ ರತ್ನಂ ಪಾಂಡೆ ಭರವಸೆ
ಪಾಲಿಕೆ ಕಚೇರಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದದ ವೇಳೆ, ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ 15 ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೆಲವೊಂದು ಕಡೆ ಭೇಟಿ ನೀಡಿದ ಸಂದರ್ಭ ತಾವು ಗಮನಿಸಿದ ಸಮಸ್ಯೆಗಳನ್ನು ಉಲ್ಲೇಖಿಸುತ್ತಾ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.
ಪಚ್ಚನಾಡಿಯಲ್ಲಿನ ಸಾಂಪ್ರದಾಯಿಕ ತ್ಯಾಜ್ಯ ವಿಲೇಗೆ ಸಂಬಂಧಿಸಿ ಟೆಂಡರ್ ಆಗಿದ್ದು, ಈ ಕುರಿತು ಸಂಬಂಧಪಟ್ಟಕಂಪನಿ ಜತೆ ಸಭೆ ನಡೆಸಬೇಕಿದೆ. ಮನೆಗಳಿಂದ ತ್ಯಾಜ್ಯ ವಿಂಗಡನೆ, ರಸ್ತೆ ಬದಿ ತ್ಯಾಜ್ಯ ಎಸೆಯುವ ಕುರಿತಂತೆಯೂ ವಿಸ್ತೃತ ಯೋಜನೆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ನಗರದಲ್ಲಿ ಬಹುದೊಡ್ಡ ಸಮಸ್ಯೆ ಭೂಗತ ಒಳಚರಂಡಿ (ಯುಜಿಡಿ)ಯದ್ದಾಗಿದೆ. 1961ರಲ್ಲಿ ಒಳಚರಂಡಿ ವ್ಯವಸ್ಥೆ ಆರಂಭವಾಗಿ ಈವರೆಗೆ ಶೇ.65ರಷ್ಟುಮಾತ್ರವೇ ಒಳಚರಂಡಿ ಇದೆ. ಒಳಚರಂಡಿ ಆಗಿರುವ ಶೇ.35ರಷ್ಟು ಭಾಗದಲ್ಲಿ 65 ವರ್ಷಗಳಿಗೂ ಹಳೆಯ ಪೈಪ್‌ಲೈನ್‌ಗಳು ಇರುವುದರಿಂದ ಮಳೆಯಿಂದ ಲೀಕೇಜ್ ಆಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಅದನ್ನು ಸಂಪೂರ್ಣವಾಗಿ ಸರಿಪಡಿಸಲು 1250 ಕೋಟಿ ರೂ.ಗಳ ಅನುದಾನದ ಅಗತ್ಯತೆಯ ಪ್ರಸ್ತಾವನೆಯನ್ನು ಈಗಾಗಲೇ ಪಾಲಿಕೆಯಿಂದ ಸರಕಾರಕ್ಕೆ ಸಲ್ಲಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಮುಂದಿನ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯುವ ನಿರೀಕ್ಷೆ ಇದ್ದು ಆ ಸಂದರ್ಭ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಈ ಸಮಸ್ಯೆಗೆ ಪರಿಹಾರ ದೊರಕಲಿದೆ.
ಈ ನಡುವೆ, ಯುಜಿಡಿಗೆ ಸಂಬಂಧಿಸಿ ತುರ್ತು ಕಾಮಗಾರಿಗಳ ಅಗತ್ಯವಿರುವಲ್ಲಿ ಪಾಲಿಕೆ ನಿಧಿಯಿಂದ ಕ್ರಮ ವಹಿಸಲಾಗುವುದು. ದಂಬೇಲ್ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ವೆಟ್‌ವೆಲ್‌ಗಳು ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ವೆಟ್‌ವೆಲ್‌ಗಳ ಪ್ರಸಕ್ತ ಸಾಮರ್ಥ್ಯವನ್ನು ಗಮನದಲ್ಲಿಸಿಕೊಂಡು ಮುಂದಿನ 2051ರ ಜನಸಂಖ್ಯೆಗೆ ಅನುಗುಣವಾಗಿ ಅವುಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಆದ್ಯತೆ ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದವರು ವಿವರ ನೀಡಿದರು.
ತ್ಯಾಜ್ಯ ನೀರು ಸಂಸ್ಕರಣೆ..
ನಗರದಲ್ಲಿರುವ ನಾಲ್ಕು ಎಸ್‌ಟಿಪಿಗಳಲ್ಲಿ ಸದ್ಯ ಕಾವೂರು ಎಸ್ಟಿಪಿಯಲ್ಲಿ ಮಾತ್ರವೇ ತ್ಯಾಜ್ಯ ನೀರು ಸಂಸ್ಕರಣೆಗೊಂಡು ಎಂಸಿಎಫ್ಗೆ ಮರುಬಳಕೆಯಾಗುತ್ತಿದೆ. ಎಸ್‌ಟಿಪಿಗಳ ಕೊಳಚೆ ನೀರು ನದಿಗಳಿಗೆ ಹರಿದು ಜಲಚರಗಳ ಸಾವು, ನೀರು ಮಾಲಿನ್ಯಗೊಳ್ಳುತ್ತಿರುವ ಕುರಿತಂತೆ ಪಾಲಿಕೆ ಮೇಲೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಎನ್ಜಿಟಿಯಿಂದ ಹಲವು ಪ್ರಕರಣಗಳು ದಾಖಲಾಗಿವೆ.
ಬಜಾಲ್, ಪಚ್ಚನಾಡಿ ಮೊದಲಾದ ಎಸ್‌ಟಿಪಿಗಳಲ್ಲಿ ಪ್ರಾಥಮಿಕ ಹಂತದ ಸಂಸ್ಕರಣೆ ಮಾಡಲಾಗುತ್ತಿದೆಯೇ ಹೊರತು ದ್ವಿತೀಯ ಹಂತದಲ್ಲಿ ಸಂಸ್ಕರಣೆ ನಡೆಯುತ್ತಿಲ್ಲ. ಬಜಾಲ್ ಮತ್ತು ಪಚ್ಚನಾಡಿಯಲ್ಲಿ ದ್ವಿತೀಯ ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ರಚನೆಯ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ.
ಕಾವೂರು ಎಸ್‌ಟಿಪಿಯಲ್ಲಿ ಕೈಗಾರಿಕೆಯ ಬೇಡಿಕೆಯ ಪ್ರಮಾಣದಲ್ಲಿ ಸಂಸ್ಕರಣೆಗೊಂಡ ನೀರು ಸಿಗುತ್ತಿಲ್ಲ. ಹಾಗಾಗಿ ಪಚ್ಚನಾಡಿ ಎಸ್‌ಟಿಪಿ ನೀರು ಬಳಕೆ ಕುರಿತಂತೆ ಈ ಹಿಂದೆಯೇ ಆಗಿರುವ ಒಪ್ಪಂದದ ಪ್ರಕಾರ ಪಚ್ಚನಾಡಿಯಿಂದ ಕಾವೂರಿಗೆ ನೀರು ಹರಿಸಿ ಕೈಗಾರಿಕೆಗೆ ಬಳಸಬಹುದಾಗಿದೆ. ಇದಕ್ಕಾಗಿ 25 ಕೋಟಿ ರೂ.ಗಳ ಅಂದಾಜು ವೆಚ್ಚ ತಯಾರಿಸಲಾಗಿದ್ದು, ಅದನ್ನು ಅರ್ಬನ್ ಚಾಲೆಂಜ್ ಫಂಡ್ (ಯುಸಿಎಫ್)ನಿಂದ ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.