ನಾವು ಸತ್ಯದ ಪರ ನಿಲ್ಲಲು ಪೇತ್ರನಂತೆ ಧೈರ್ಯಶಾಲಿಗಳಾಗಬೇಕು: ಬಿಷಪ್ ಅ. ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

ನಾವು ಸತ್ಯದ ಪರ ನಿಲ್ಲಲು ಪೇತ್ರನಂತೆ ಧೈರ್ಯಶಾಲಿಗಳಾಗಬೇಕು: ಬಿಷಪ್ ಅ. ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ


ಮಂಗಳೂರು: ಪವಿತ್ರ ಸಭೆ ಸತ್ಯವನ್ನು ಹೇಳಲು ಪ್ರೇರೆಪಿಸುತ್ತದೆ. ಪೋಪ್ ಲಿಯೋ ಅವರು ಕೂಡ ಸತ್ಯದ ಹಾದಿಯಲ್ಲಿ ಮುನ್ನಡೆಯಲು ಕರೆ ನೀಡಿದ್ದಾರೆ. ಅಮೇರಿಕಾ-ಇರಾನ್ ಯದ್ಧದ ಸಂದರ್ಭದಲ್ಲಿ ಅನ್ಯಾಯವನ್ನು ಎತ್ತಿ ತೋರಿಸಿದ ಅವರು, ಸತ್ಯ ಹಾಗೂ ನ್ಯಾಯದ ಮಾರ್ಗದಲ್ಲಿ ನಡೆಯುವಂತೆ ತಿಳಿಸಿದ್ದರು. ಕ್ರಿಸ್ತರ ಅನುಯಾಯಿಗಳಾದ ನಾವು ಸತ್ಯದ ಪರ ನಿಲ್ಲಲು ಪೇತ್ರನಂತೆ ಧೈರ್ಯಶಾಲಿಗಳಾಗಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ. ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು.

ಪೆರುವಾಯಿ ಫಾತಿಮಾ ಮಾತೆಯ ದೇವಾಲಯಕ್ಕೆ ಎರಡು ದಿನಗಳ ಅಧಿಕೃತ ಭೇಟಿಯ ವೇಳೆ ಯುವ ವಿದ್ಯಾರ್ಥಿಗಳಿಗೆ ಪವಿತ್ರ ದೃಢೀಕರಣ ಸಂಸ್ಕಾರದ ಬಲಿಪೂಜೆಯಲ್ಲಿ ಅವರು ಆಶೀರ್ವಚನ ನೀಡಿದರು.

ಸಣ್ಣ ಪುಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ಯುವ ಜನತೆ ಭರವಸೆ ಕಳೆದುಕೊಳ್ಳಬಾರದು. ಯಾರದೋ ಮಾತುಗಳಿಗೆ ಬಲಿಯಾಗಬಾರದು. ದೇವರಲ್ಲಿ ವಿಶ್ವಾಸವನ್ನಿರಿಸಿಕೊಳ್ಳಬೇಕು. ಕ್ರೈಸ್ತ ವಿಶ್ವಾಸಿಗಳು ಪವಿತ್ರ ಸಭೆಯಲ್ಲಿ ದೃಢ ವಿಶ್ವಾಸ ಹೊಂದಿರಬೇಕು. ಕ್ರಿಸ್ತ ವಿಶ್ವಾಸವನ್ನು ಮಕ್ಕಳು, ಯುವ ಜನತೆಗೆ ಕಲಿಸುವ ಮೂಲಕ ನಮ್ಮ ವಿಶ್ವಾಸ ಮತ್ತಷ್ಟು ದೃಢಗೊಳ್ಳಲಿದೆ. ಎಷ್ಟೇ ಕಷ್ಟ ನಷ್ಟ ಬಂದರೂ ಕ್ರಿಸ್ತರ ಮೇಲಿನ ವಿಶ್ವಾಸ ಕಳೆದುಕೊಳ್ಳಬಾರದು ಎಂದರು.

ಬಲಿಪೂಜೆಯಲ್ಲಿ ಚರ್ಚ್‌ನ ಪ್ರಧಾನ ಧರ್ಮಗುರು ವಂ. ಸೈಮನ್ ಡಿಸೋಜಾ, ಬಿಷಪ್ ಅವರ ಕಾರ್ಯದರ್ಶಿ ವಂ. ಐವನ್ ಡಿಸೋಜಾ, ಬ್ರ. ಪ್ರಿತೇಶ್ ಪಿಂಟೊ ಭಾಗವಹಿಸಿದ್ದರು. ಪಾಲನಾ ಸಮಿತಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ, ಸರ್ವ ಆಯೋಗದ ಸಂಯೋಜಕ ರಾಲ್ಫ್ ಡಿಸೋಜಾ, ವಿಲ್ಫ್ರೆಡ್ ಡಿಸೋಜಾ ಮತ್ತಿತರರು ಇದ್ದರು.

ಬಲಿಪೂಜೆಯ ಬಳಿಕ ಚರ್ಚ್ ಪಾಲನಾ ಸಮಿತಿ ಹಾಗೂ ಆರ್ಥಿಕ ಸಮಿತಿಯ ಜತೆಗೆ ಧರ್ಮಾಧ್ಯಕ್ಷರು ಸಭೆ ನಡೆಸಿ ಚರ್ಚ್‌ನ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು. ಇದೇ ವೇಳೆ ಚರ್ಚ್‌ಗೆ ವಿವಿಧ ರೀತಿಯಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತಿರುವ ಬಿಷಪ್ ಅವರನ್ನು ಪಾಲನಾ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು. 

ಎರಡನೇ ದಿನ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಬಿಷಪ್ ಅವರು ವರದಿಗಳನ್ನು ಪರಿಶೀಲನೆ ನಡೆಸಿದರು. ಸಂಘಟನೆಗಳನ್ನು ಬಲಪಡಿಸಿ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಬಳಿಕ ಚರ್ಚ್ ವ್ಯಾಪ್ತಿಯ ಕೆಲವು ರೋಗಿಗಳ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಂತ ಅಂತೋನಿ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article