ಆರೋಗ್ಯ ಇಲಾಖೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀರ್ಘ ನಿಯಮಾವಳಿ: ಸಚಿವ ಯು.ಟಿ. ಖಾದರ್
ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಸುಮಾರು ಒಂದೂವರೆ ಸಾವಿರದಷ್ಟು ವೈದ್ಯರು, ನರ್ಸ್ ಹಾಗೂ ಲ್ಯಾಬ್ ಟೆಕ್ನಿಶಿಯನ್ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ಈ ನೇಮಕಾತಿ ನಡೆಯುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ 200 ಮಂದಿ ಎಂಬಿಬಿಎಸ್ ವೈದ್ಯರ ಹುದ್ದೆ ಭರ್ತಿಗೊಂಡಿದೆ. ನೇಮಕಾತಿಗೆ ಈಗಲೂ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಇದಲ್ಲದೆ ಇತರೆ ವಿಭಾಗಗಳಲ್ಲಿ ಖಾಲಿ ಇರುವ ಮೂರೂವರೆ ಸಾವಿರ ಹುದ್ದೆ ಭರ್ತಿಗೆ ಅನುಮತಿ ಸಿಕ್ಕಿದ್ದು, ನೇಮಕಾತಿಗೆ ನಿಯಮ ರೂಪಿಸಲಾಗುವುದು ಎಂದರು.
ಪಿಎಚ್‌ಸಿಗಳಿಗೆ ಆ್ಯಂಬುಲೆನ್ಸ್:
ಪ್ರತಿ ತಾಲೂಕುಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅತ್ಯುತ್ತಮ ಆ್ಯಂಬುಲೆನ್ಸ್ ಹೊಂದುವ ದಿಶೆಯಲ್ಲಿ ಸರ್ಕಾರ ಹೊಸ ಆ್ಯಂಬುಲೆನ್ಸ್‌ಗಳ ಖರೀದಿಗೆ ಒಪ್ಪಿಗೆ ನೀಡಿದೆ. ನಿಗದಿತ ಅಲ್ಲದೆ ಒಂದು ಹೆಚ್ಚುವರಿ ಆ್ಯಂಬುಲೆನ್ಸ್‌ನ್ನು ಕೂಡ ಜಿಲ್ಲೆಗೆ ನೀಡಲಾಗುವುದು. ಹಾಲಿ 108 ಆ್ಯಂಬುಲೆನ್ಸ್‌ಗಳ ಸಂಖ್ಯೆ 450 ಆಗಿದ್ದು, ಅವುಗಳನ್ನು 15 ದಿನಕ್ಕೊಮ್ಮೆ ನಿರ್ವಹಣೆ ಮಾಡುವುದು, ಚಾಲಕರಿಗೆ ಸಮವಸ್ತ್ರ ಸಂಹಿತೆ, ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ಇದಲ್ಲದೆ 750 ಹೊಸ ಆ್ಯಂಬುಲೆನ್ಸ್ ಕೂಡ ರಸ್ತೆಗೆ ಇಳಿಯಲಿದೆ. ಈ ಕುರಿತಂತೆ ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ 20 ನಿಮಿಷ, ನಗರದಲ್ಲಿ 15 ನಿಮಿಷದ ಅವಧಿಯಲ್ಲಿ ಕರೆ ಮಾಡಿದ ಸ್ಥಳಕ್ಕೆ ಆ್ಯಂಬುಲೆನ್ಸ್‌ಗಳು ತಲುಪಬೇಕು. ತಪ್ಪಿದಲ್ಲಿ ಆ್ಯಂಬುಲೆನ್ಸ್‌ನ ಗುತ್ತಿಗೆ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ. ಇದೇ ರೀತಿ 100 ಬೈಕ್ ಆ್ಯಂಬುಲೆನ್ಸ್‌ಗಳನ್ನು ಕೂಡ ಖರೀದಿಸಲಿದ್ದು, ಅವುಗಳ ನಿರ್ವಹಣೆಯನ್ನೂ ಒಂದೇ ಕಂಪನಿ ವಹಿಸಿಕೊಳ್ಳಲಿದೆ. ಆ್ಯಂಬುಲೆನ್ಸ್ ಮತ್ತು ಬೈಕ್ ಆ್ಯಂಬುಲೆನ್ಸ್‌ಗಳಿಗೆ ಸರ್ಕಾರ ಏಕಪ್ರಕಾರವಾದ ಮಾನದಂಡ ವಿಧಿಸಲಿದೆ. ಈ ಹೊಸ ಆ್ಯಂಬುಲೆನ್ಸ್ ಮತ್ತು ಬೈಕ್ ಆ್ಯಂಬುಲೆನ್ಸ್‌ಗಳು ಮೂರು ತಿಂಗಳಲ್ಲಿ ಸಜ್ಜುಗೊಂಡು ರಸ್ತೆಗೆ ಇಳಿಯಲಿದೆ ಎಂದರು.
ಉಚಿತ ಚಿಕಿತ್ಸಾ ಯೋಜನೆಗಳು:
ಪ್ರಸಕ್ತ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಇರುವ ‘ಆಯುಷ್ಮಾನ್ ಕರ್ನಾಟಕ’ ಯೋಜನೆಯನ್ನು ಎಪಿಎಲ್ ಕಾರ್ಡ್‌ದಾರರಿಗೂ ವಿಸ್ತರಿಸಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರು ಖಾಸಗಿ ಆಸ್ಪತ್ರೆಯ ಜನರಲ್ ವಾರ್ಡ್‌ಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ಜಾರಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.
ನಿವೃತ್ತ ಸರ್ಕಾರಿ ನೌಕರರಿಗೆ ‘ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆ ಜಾರಿಯಲ್ಲಿದ್ದು, ದರ ಜಾಸ್ತಿ ಮಾಡಿ ಚಿಕಿತ್ಸೆಗೆ ಅನುಕೂಲ ಕಲ್ಪಿಸುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ನಿವೃತ್ತರಿಗೆ ಸಂಧ್ಯಾ ಕಿರಣ ಯೋಜನೆ:
60 ರಿಂದ 70 ವರ್ಷದ ವಯಸ್ಸಿನವರಿಗೆ ‘ಸಂಧ್ಯಾ ಕಿರಣ’ ಹೆಸರಿನಲ್ಲಿ ಯೋಜನೆ ಜಾರಿಯಾಗಲಿದೆ. ನಿವೃತ್ತರ ಪಿಂಚಣಿಯ ಶೇ.1.25 ಮೊತ್ತವನ್ನು ಪಾವತಿಸಿ ಈ ಯೋಜನೆಯ ಪ್ರಯೋಜನ ಪಡೆಯಬಹುದು. ನಿವೃತ್ತರು ಮೃತಪಟ್ಟರೆ, ಅವರ ಕುಟುಂಬದ ಅವಲಂಬಿತರು ಶೇ. 0.75 ಮೊತ್ತವನ್ನು ಪಾವತಿಸಿ ಯೋಜನೆಯನ್ನು ಮುಂದುವರಿಸಬಹುದು ಎಂದರು.
ಸಾಮಾನ್ಯರಿಗೆ ‘ವಯೋ ವಂದನಾ’:
70 ವರ್ಷ ಮೇಲ್ಪಟ್ಟ ಸಾಮಾನ್ಯ ಜನತೆಗಾಗಿ ಕೇಂದ್ರ ಸರ್ಕಾರ ಈಗಾಗಲೇ ‘ವಯೋ ವಂದನಾ’ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಇದು ಸಮರ್ಪಕವಾಗಿ ಜಾರಿಗೊಂಡಿಲ್ಲ. ಪ್ರಸಕ್ತ ಬಿಪಿಎಲ್‌ಗೆ ಮಾತ್ರ ಉಚಿತ ಚಿಕಿತ್ಸೆ ಇದ್ದು, ಇದನ್ನು ಎಪಿಎಲ್‌ಗೂ ವಿಸ್ತರಿಸಬೇಕಾಗಿದೆ. ಹೀಗಾಗಿ ರಾಜ್ಯದ ಪಾಲು ಸೇರಿಸಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆಯಲಿದ್ದಾರೆ ಎಂದರು.
ಸರ್ಕಾರದ ಈ ಎಲ್ಲ ಯೋಜನೆಗಳನ್ನು ಖಾಸಗಿ ಆಸ್ಪತ್ರೆಗಳು ಕೂಡ ಅನುಷ್ಠಾನಗೊಳಿಸಬೇಕಾಗಿದೆ. ಅದಕ್ಕಾಗಿ ಆಸ್ಪತ್ರೆಗಳ ಅಸೋಸಿಯೇಷನ್‌ಗಳ ಜೊತೆ ಮಾತುಕತೆ ನಡೆಸಲಾಗಿದೆ. ಕೆಲವು ಯೋಜನೆಗಳಲ್ಲಿ ಹಣಕಾಸಿನ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಪೊಲೀಸ್ ಸಿಬ್ಬಂದಿಯ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಆಸ್ಪತ್ರೆಗಳು ನಿರಾಕರಿಸುತ್ತಿರುವ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಲಬೆರಕೆ ಬಗ್ಗೆ ದೂರು ನೀಡಿ:
ಆಹಾರ ಸುರಕ್ಷತೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಆಹಾರ ಕಲಬೆರಕೆಗೆ ತಡೆಗೆ ಎಲ್ಲ ರೀತಿಯ ತಪಾಸಣೆ, ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಂತಹ ಪ್ರಕರಣ ಕಂಡುಬಂದರೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಅಥವಾ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡಬಹುದು ಎಂದರು.
ಮುಖಂಡ ಮೋನು ಕಣಚೂರು ಇದ್ದರು.