ತಲೆಮರೆಸಿಕೊಂಡಿದ್ದ ಕುಖ್ಯಾತನ ಬಂಧನ
ಉಳ್ಳಾಲ ತಾಲೂಕಿನ ಮಾರ್ಗತಲೆ ನಿವಾಸಿ, ಪ್ರಸ್ತುತ ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಪಾವೂರು ಪೋಸ್ಟ್‌ನ ಕುಂಡಕೋಡು ಬಿಲ್ಲೆ, ಗೋಡುಪಡ್ಪೆ, ’ನಾಜಿಯಾ ಮಂಜಿಲ್’ನಲ್ಲಿ ವಾಸವಾಗಿದ್ದ ಉಮರ್ ನವಾಫ್ (33) ಬಂಧಿತ ಆರೋಪಿ.
ಈ ಯಶಸ್ವಿ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, "ಬಂಧಿತ ಉಮರ್ ನವಾಫ್ ವಿರುದ್ಧ ಉಳ್ಳಾಲ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ಅಪಹರಣ, ಸುಲಿಗೆ, ದರೋಡೆ ಹಾಗೂ ಆಸ್ತಿ ಪಾಸ್ತಿ ಹಾನಿ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಈತ ಕಳೆದ 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಈತನ ವಿರುದ್ಧ ನ್ಯಾಯಾಲಯವು 30ಕ್ಕೂ ಹೆಚ್ಚು ವಾರಂಟ್‌ಗಳನ್ನು ಹೊರಡಿಸಿತ್ತು. ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನಾಂಕ ಆಗಸ್ಟ್ 2 ರಂದು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ" ಎಂದು ತಿಳಿಸಿದ್ದಾರೆ.