ಪ್ರತೀ ಸಹಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಸ್ಥಾಪಕರ ಕೊಡುಗೆ ಅಪಾರ
Sunday, August 30, 2026
ಮಂಗಳೂರು: ಪ್ರತೀ ಸಹಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಅದರ ಸ್ಥಾಪಕರ ಕೊಡುಗೆ ಮತ್ತು ಪರಿಶ್ರಮ ಅಪಾರವಿರುತ್ತದೆ. ಇಂದು ಬಹುತೇಕ ಸಹಕಾರಿ ಸಂಸ್ಥೆಗಳಿಗೆ ಜಾಗಗಳನ್ನು ಕೂಡ ಅದರ ಸ್ಥಾಪಕರೇ ಉಚಿತವಾಗಿ ನೀಡಿ ಕಟ್ಟಿ ಬೆಳೆಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರತೀ ಸಹಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರ ಕೊಡುಗೆಯನ್ನು ನೆನಪಿಸಿಕೊಳ್ಳಲು ಸಂಸ್ಥಾಪಕರ ದಿನವನ್ನು ಪ್ರತೀ ವರ್ಷ ಆಚರಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ನಿಯಮ ಜಾರಿಗೆ ತರಬೇಕು ಎಂಬ ಅಭಿಪ್ರಾಯ ಚಿಂತಕ ಅರವಿಂದ ಚೊಕ್ಕಾಡಿ ರಚಿತ ‘ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಕೆ. ಶಿವರಾಮ ಕಾರಂತ ಸಭಾಭವನದಲ್ಲಿ ಭಾನುವಾರ ನಡೆದ ಈ ಸಂವಾದದಲ್ಲಿ, ರಾಜಕೀಯದಿಂದ ಹೊರತಾದ ಸಹಕಾರಿ ಕ್ಷೇತ್ರದಿಂದ ಜನಸೇವೆ ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಪಾಣೆಮಂಗಳೂರು ಸೇತುವೆ, ಮಂಗಳೂರು ಆಕಾಶವಾಣಿ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿಗೆ ಸಹಕಾರಿ ಕ್ಷೇತ್ರದ ದಿಗ್ಗಜರ ಹೆಸರನ್ನಿಟ್ಟು, ಅವರ ಕೊಡುಗೆಯನ್ನು ಮುಂದಿನ ತಲೆಮಾರಿಗೂ ಮಾದರಿಯಾಗುವಂತೆ ಮಾಡುವ ಕೆಲಸ ನಡೆಯಬೇಕು. ಮೊಳಹಳ್ಳಿ ಶಿವರಾಯರ ಕುರಿತು ಸಹಕಾರಿ ಸಂಘ ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಅವರ ಚಿಂತನೆಯನ್ನು ಸಮಾಜಕ್ಕೆ ತಲುಪಿಸುವ ಕೆಲಸ ಆಗಬೇಕು ಎಂಬ ಅಭಿಪ್ರಾಯಗಳು ಸಂವಾದದಲ್ಲಿ ವ್ಯಕ್ತವಾದವು.
ಹಿರಿಯ ಲೆಕ್ಕಪರಿಶೋಧಕ ಸಿ.ಎ. ಚಂದ್ರಕಾಂತ್ ರಾವ್, ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕ ಬಿ.ಕೆ. ಸಲೀಮ್, ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಹಿರಿಯ ಸಹಕಾರಿ ರಾಧಾಕೃಷ್ಣ ಕೋಟೆ ಅವರು ಸಂವಾದದಲ್ಲಿ ಭಾಗವಹಿಸಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಲೇಖಕ ಅರವಿಂದ ಚೊಕ್ಕಾಡಿ ಸಮನ್ವಯಕಾರರಾಗಿ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಅಧ್ಯಕ್ಷತೆ ವಹಿಸಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
