ರಥಬೀದಿ ಕಾಲೇಜಿನಲ್ಲಿ ಎಚ್‌ಐವಿ/ಏಡ್ಸ್ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ
Monday, August 31, 2026
ಮಂಗಳೂರು: ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ರೆಡ್ ರಿಬ್ಬನ್ ಕ್ಲಬ್‌ಗಳ ಸಹಯೋಗದಲ್ಲಿ ಯುವ ರೆಡ್‌ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವತಿಯಿಂದ ಎಚ್‌ಐವಿ/ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಹಾಗೂ ಆಪ್ತ ಸಮಾಲೋಚಕ ಮಹೇಶ್ ಯು.ಕೆ. ಅವರು ಭಾಗವಹಿಸಿ, ಎಚ್‌ಐವಿ/ಏಡ್ಸ್‌ನ ಹರಡುವಿಕೆ, ತಡೆಗಟ್ಟುವ ಕ್ರಮಗಳು, ಮುನ್ನೆಚ್ಚರಿಕೆಗಳು ಹಾಗೂ ರೋಗದ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಅಗತ್ಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಆರೋಗ್ಯಕರ ಜೀವನಶೈಲಿ ಹಾಗೂ ವೈಜ್ಞಾನಿಕ ಅರಿವು ಬೆಳೆಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕರ್, ಐಕ್ಯೂಎಸಿ ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ಎಚ್‌ಐವಿ/ಏಡ್ಸ್ ಕುರಿತು ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳಾದ ಜಯಶೀಲಾ ಕಾರ್ಯಕ್ರಮ ನಿರೂಪಿಸಿ, ಹಂಸಿನಿ ಸ್ವಾಗತಿಸಿದರು. ಸ್ವಾತಿ ವಂದಿಸಿದರು.