‘ಅಡಿಕೆ ಬೆಳೆಗಾರರ ಬಲಿಪಶು ಮಾಡಬೇಡಿ’: ಎಸ್.ಆರ್. ಸತೀಶ್ಚಂದ್ರ
Saturday, August 15, 2026
ಮಂಗಳೂರು: ರಾಜ್ಯ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವಿರುವ ಉತ್ಪನ್ನ ನಿಷೇಧಿಸಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರನ್ನು ಬಲಿಪಶು ಮಾಡಬಾರದು, ಈ ನಿಟ್ಟಿನಲ್ಲಿ ಸ್ಪಷ್ಟ ಚೌಕಟ್ಟು ರಚಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಆಗ್ರಹಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ಸರ್ಕಾರದ ಉದ್ದೇಶವನ್ನು ಕ್ಯಾಂಪ್ಕೊ ಗೌರವಿಸುತ್ತದೆ. ಆದರೆ ಅಡಿಕೆ ಬೆಳೆಗಾರರ ಹಾಗೂ ಕಾನೂನುಬದ್ಧ ಅಡಿಕೆ ವ್ಯಾಪಾರದ ಹಿತಾಸಕ್ತಿಗಳಿಗೆ ಧಕ್ಕೆ ಉಂಟುಮಾಡದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ನಿಷೇಧದ ಜಾರಿಯು ಅಧಿಸೂಚನೆಯಲ್ಲಿ ಒಳಗೊಂಡಿರುವ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕು ಹಾಗೂ ಅಡಿಕೆಯ ಕೃಷಿ ಉತ್ಪನ್ನದ ಸ್ಥಾನಮಾನ, ಅದರ ಕಾನೂನುಬದ್ಧ ಬೆಳೆಯುವಿಕೆ, ಸಂಗ್ರಹಣೆ, ಸಂಸ್ಕರಣೆ ಮತ್ತು ವ್ಯಾಪಾರದ ಮೇಲೆ ಯಾವುದೇ ಪರೋಕ್ಷ ನಿರ್ಬಂಧ ಉಂಟಾಗದಂತೆ ಖಚಿತಪಡಿಸಿಕೊಳ್ಳಬೇಕೆಂದು ಅವರು ಸರ್ಕಾರ ಹಾಗೂ ಜಾರಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.