ಭಾರೀ ಮಳೆ: ಸನ್ನದ್ಧವಾಗಿರಲು ಸೂಚನೆ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

ಭಾರೀ ಮಳೆ: ಸನ್ನದ್ಧವಾಗಿರಲು ಸೂಚನೆ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

ಮಂಗಳೂರು: ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ.

ಅವರು ಶನಿವಾರ ಈ ಸಂಬಂಧ ಅಧಿಕಾರಿಗಳೊಂದಿಗೆ  ಆನ್‌ಲೈನ್ ಸಭೆ ನಡೆಸಿ, ಮಳೆ ಅನಾಹುತಗಳನ್ನು ನಿರ್ವಹಿಸಲು ಎಲ್ಲ ತಾಲೂಕು ಆಡಳಿತಗಳು ದಿನದ 24 ಗಂಟೆಗಳ ಕಾಲವೂ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕು. ಕಂಟ್ರೋಲ್ ರೂಂಗಳು ದಿನಪೂರ್ತಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಗುಡ್ಡ ಕುಸಿತ, ಮಣ್ಣು ಜರಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈಗಾಗಲೇ ಗುರುತಿಸಿರುವ ಸಂಭಾವ್ಯ ಕುಸಿತ ಸ್ಥಳಗಳಲ್ಲಿ ನಿಗಾ ವಹಿಸಬೇಕು. ಅಗತ್ಯ ಬಿದ್ದರೆ, ಮುಂಜಾಗ್ರತಾ ಕ್ರಮವಾಗಿ ಅಪಾಯದ ಸಾಧ್ಯತೆ ಇರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಿಸಬೇಕು. ಮಣ್ಣು ಜರಿಯುವ ಸಾಧ್ಯತೆಗಳಿರುವ ಸ್ಥಳಗಳಲ್ಲಿ ಮರಳು ಚೀಲಗಳನ್ನು ಇಟ್ಟು ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು. ಖಾಸಗಿ ಜಮೀನುಗಳಲ್ಲೂ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರಾಕೃತಿಕ ವಿಕೋಪದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ಚೆಕ್ ನೀಡಬೇಕು. ಮಳೆ ಅನಾಹುತದಿಂದ ಸ್ಥಳಾಂತರಗೊಂಡವರಿಗೆ ಅಗತ್ಯ ಸೌಲಭ್ಯಗಳು ದೊರಕಿಸಲು ಗಮನಹರಿಸಬೇಕು. ಅಗ್ನಿಶಾಮಕ, ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್. ತಂಡಗಳು ಸದಾ ಸನ್ನದ್ಧವಾಗಿರಬೇಕು ಎಂದು ಅವರು ಸೂಚಿಸಿದರು. 

ಚಾರ್ಮಾಡಿ, ಸಂಪಾಜೆ, ಶಿರಾಡಿ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಪ್ರಕರಣಗಳು ಸಂಭವಿಸಿದ್ದಲ್ಲಿ ಅವುಗಳನ್ನು ತೆರವುಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಇದುವರೆಗೆ ಜಿಲ್ಲೆಯಲ್ಲಿ ಹೆದ್ದಾರಿ ತಡೆಯಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ದರ್ಶನ್ ಎಚ್.ವಿ. ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article