ದಿನವಿಡೀ ಪ್ರಖರ ಬಿಸಿಲು ಸಹಿತ ಸಂಜೆ ಸಾಧಾರಣ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಪ್ರಖರ ಬಿಸಿಲು ಸಹಿತ ಸಂಜೆ ಸಾಧಾರಣ ಮಳೆಯಾಗಿದೆ. ಬೆಳಗಿನ ಜಾವ ಮೋಡ ಮತ್ತು ಬಿಸಿಲಿನಿಂದ ಆರಂಭವಾದ ವಾತಾವರಣ, ಸಂಜೆಯ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಬಿರುಸು ಪಡೆದುಕೊಂಡಿತು. ಸೂರ್ಯನ ಪ್ರಖರ ದರ್ಶನದಿಂದ ಬಿಸಿಲು ಹೆಚ್ಚಿದ್ದು, ಮುಂಬರುವ ದಿನಗಳಲ್ಲಿ ಮಳೆಯ ತೀವ್ರತೆ ಕೊಂಚ ತಗ್ಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದೊಂದಿಗೆ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಆದರೆ ಮೋಡದ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಸುಳ್ಯ ತಾಲ್ಲೂಕು ಹಾಗೂ ಕಡಬ ತಾಲೂಕುಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಸಾಧ್ಯತೆಗಳಿವೆ. ಕಾಸರಗೋಡು ಜಿಲ್ಲೆಯಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ಜೊತೆಗೆ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿಯ ಹೆಬ್ರಿ, ಕಾರ್ಕಳ ಸುತ್ತಮುತ್ತ ಮೋಡದೊಂದಿಗೆ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಗುರುವಾರ ಬೆಳಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 23.6 ಮಿ.ಮೀ ಮಳೆ ದಾಖಲಾಗಿದ್ದು, ಮೂಡಬಿದ್ರೆಯಲ್ಲಿ ಗರಿಷ್ಠ 49.8 ಮಿ.ಮೀ ಮಳೆಯಾಗಿದೆ. ಗಾಳಿಯ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಪಶ್ಚಿಮ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಳೆ ಪ್ರಮಾಣ ತುಸು ಹೆಚ್ಚಿರಲಿದೆ. ಈಗಿನಂತೆ ಮುಂದಿನ 10 ದಿನಗಳವರೆಗೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ದಿನದಲ್ಲಿ ಒಂದೆರಡು ಮಳೆ ಮುಂದುವರಿಯುವ ಲಕ್ಷಣಗಳಿವೆ. ಆಗಸ್ಟ್ 23 ರಿಂದ 25ರ ತನಕ ಮಳೆ ಸ್ವಲ್ಪ ಹೆಚ್ಚಿರುವ ಮುನ್ಸೂಚನೆ ಇದೆ ಎಂದು ಹವಾಮಾಣ ಇಲಾಖೆ ಮಾಹಿತಿ ನೀಡಿದೆ.