ಕೂಲಿ ಕಾರ್ಮಿಕರನ್ನು ಭೂಮಾಲಿಕರನ್ನಾಗಿಸಿದ ಧೀಮಂತ ವ್ಯಕ್ತಿ ದೇವರಾಜ ಅರಸು: ಟಿ.ಎಂ. ಶಾಹಿದ್

ಕೂಲಿ ಕಾರ್ಮಿಕರನ್ನು ಭೂಮಾಲಿಕರನ್ನಾಗಿಸಿದ ಧೀಮಂತ ವ್ಯಕ್ತಿ ದೇವರಾಜ ಅರಸು: ಟಿ.ಎಂ. ಶಾಹಿದ್


ಮಂಗಳೂರು: ಬೆರಳೆಣಿಕೆಯಷ್ಟು ಮಂದಿ ಭೂಮಿಯ ಒಡೆತನ ಹೊಂದಿದ್ದ ಸಮಾಜದಲ್ಲಿ ಇಂದು ಸಾವಿರಾರು ಮಂದಿ ಭೂ ಮಾಲೀಕರಾಗಲು ಅಂದಿನ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ ದೂರದೃಷ್ಟಿ  ಕಾರಣ ಎಂದು ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ಹೇಳಿದರು.


ಅವರು ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದೊಂದಿಗೆ ಸಾಮಾಜಿಕ ನ್ಯಾಯದ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

ಜಮೀನಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಜನರು, ಭೂಮಿಯ  ಮಾಲೀಕರಾಗುವ ಕನಸು ಕಾಣಲು ಕೂಡ ಸಾಧ್ಯವಿಲ್ಲದಂತಹ ಕಾಲಘಟ್ಟದಲ್ಲಿ  ದೇವರಾಜು ಅರಸು ಅವರ ಆಡಳಿತ ಮತ್ತು ನೀತಿಯ ಫಲವಾಗಿ ಸಮಾಜದ ಅತ್ಯಂತ ಕೆಳಸ್ತರದಲ್ಲಿರುವವರಿಗೆ ಕೂಡ ಭೂಮಿಯ ಒಡೆತನ ದೊರೆಯಿತು ಎಂದರು.

ಶಿಕ್ಷಣದಿಂದ ಯಾವುದೇ ಸಮುದಾಯವು ಮೇಲಕ್ಕೆ ಬರಲು ಸಾಧ್ಯ ಎಂಬುದನ್ನು ಮನಗಂಡ ಅರಸು ಅವರು, ಅದಕ್ಕಾಗಿ ಹಲವಾರು ಶಾಲೆಗಳನ್ನು ತೆರೆಯಲು ಕಾರಣರಾದರು. ನಗರ ಪ್ರದೇಶಗಳಲ್ಲಿ ಹಾಸ್ಟೆಲ್‍ಗಳನ್ನು ಸ್ಥಾಪಿಸುವ ಮೂಲಕ ಬಡವರು ಉನ್ನತ ಶಿಕ್ಷಣ ಕಲಿಯಲು ನಗರಗಳಿಗೆ ಬರುವಂತಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಅರಸು ಅವರ ಆಡಳಿತ ದೂರದೃಷ್ಟಿ ಸಹಕಾರಿಯಾಯಿತು ಎಂದು ಟಿ.ಎಂ ಶಾಹಿದ್ ಹೇಳಿದರು.

ಸಂಪನ್ಮೂಲ ವ್ಯಕ್ತಿ ನಂದಿಕೂರು ಎಜುಕೇಶನ್ ಟ್ರಸ್ಟ್ ಆಡಳಿತ ಅಧಿಕಾರಿ ಸಾಯಿನಾಥ್ ಶೆಟ್ಟಿ ಮುಂಡ್ಕೂರು ಮಾತನಾಡಿ,  ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಮತ್ತು ದಲಿತರ ಸಾಮಾಜಿಕ ಮತ್ತು ಶೈಕ್ಷಣಿಕ  ಪ್ರಗತಿಗೆ ದೇವರಾಜ ಅರಸು  ಅಹರ್ನಿಶಿ ದುಡಿದರು. ಭೂ ಒಡೆತನದಿಂದ ದುರ್ಬಲ ವರ್ಗದವರು ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಗತಿ ಹೊಂದುವಂತಾಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ  ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಅಪರ ಜಿಲ್ಲಾಧಿಕಾರಿ ರಾಜು ಕೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ  ಶಶಿಧರ್, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಶಕುಂತಲಾ ಮತ್ತಿತ್ತರರು ಇದ್ದರು.

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಸದ್ಭಾವನಾ ದಿನದ ಪ್ರತಿಜ್ಞೆ ಸ್ವೀಕರಿಸಲಾಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ ಎನ್ ನಾಯಕ್ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article