ಕುಳೂರು ಹೆದ್ದಾರಿ ಸರ್ವೀಸ್ ರಸ್ತೆ ಸೇತುವೆ ತಕ್ಷಣ ದುರಸ್ತಿಗೆ DYFI ಪಂಜಿಮೊಗರು ಘಟಕ ಆಗ್ರಹ
ಮಂಗಳೂರು: ಕುಳೂರು ಭಾಗದ ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ರಸ್ತೆಗಳು, ಹೊಂಡ-ಗುಂಡಿಗಳಿಂದ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು ವಾಹನ ಸಂಚಾರ ಕಷ್ಟಕರವಾಗಿದೆ. ಹೆದ್ದಾರಿ ಪ್ರಾಧಿಕಾರ ರಸ್ತೆಯನ್ನು ಸರಿಯಾಗಿ ದುರಸ್ತಿಗೊಳಿಸದೆ ವಾಹನ ಸವಾರರ, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ. ದಿನನಿತ್ಯ ಇಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಈ ಭಾಗವು ಅಪಾಯಕಾರಿ ಅಪಘಾತ ವಲಯವಾಗಿ ಪರಿಣಮಿಸಿದೆ. ರಸ್ತೆಯ ಕಳಪೆ ನಿರ್ವಹಣೆಯಿಂದಾಗಿ ಪ್ರತಿದಿನ ಕಿಲೋಮೀಟರ್‌ಗಟ್ಟಲೆ ವಾಹನ ದಟ್ಟಣೆ ಉಂಟಾಗುತ್ತಿದ್ದು, ಮಂಗಳೂರು-ಉಡುಪಿ ಮಾರ್ಗವಾಗಿ ಪ್ರಯಾಣಿಸುವವರು ಹಾಗೂ ವಿಮಾನ ನಿಲ್ದಾಣಕ್ಕೆ ತೆರಳುವ ಸಾರ್ವಜನಿಕರು, ಪ್ರತಿನಿತ್ಯ ಸಂಚರಿಸುವ ನಾಗರಿಕರಿಗೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಡಿವೈಎಫ್‌ಐ ಪಂಜಿಮೊಗರು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷವೂ ಸಹ ಇದೇ ರೀತಿ ಕೆಟ್ಟ ರಸ್ತೆಯಿಂದಾಗಿ ಮಹಿಳೆಯೊಬ್ಬರು ದುರ್ಮರಣಕ್ಕೀಡಾಗಿದ್ದರು. ಅಂತಹ ದುರಂತ ಈ ಬಾರಿಯೂ ಮರುಕಳಿಸುವ ಮುನ್ನ ಹೆದ್ದಾರಿ ಪ್ರಾಧಿಕಾರವು ತಕ್ಷಣವೇ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಇದಲ್ಲದೆ ಕುಳೂರಿನ ಹಳೆ ಸೇತುವೆಯ ಮೇಲೆಯೂ ದೊಡ್ಡ ಹೊಂಡಗಳು ಬಿದ್ದಿದ್ದು, ವಾಹನ ಸವಾರರು ಪ್ರಾಣಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಳೆ ಸೇತುವೆ ಗುಂಡಿಗಳು ಸೇತುವೆಯ ಗುಣಮಟ್ಟ ಮತ್ತಷ್ಟು ಕುಸಿಯಲು ಕಾರಣವಾಗಿದೆ.
ಮತ್ತೊಂದೆಡೆ ಹಲವಾರು ವರ್ಷಗಳಿಂದ ನೂತನ ಸೇತುವೆ ನಿರ್ಮಾಣ ಕಾಮಗಾರಿಯು ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದ್ದು, ಇದನ್ನು ಶೀಘ್ರದಲ್ಲೇ ಪೂರ್ಣ ಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣವೇ ಎಚ್ಚೆತ್ತುಕೊಂಡು ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯನ್ನು ಸುಸಜ್ಜಿತಗೊಳಿಸಬೇಕು. ಕಳೆದ ಕೆಲವು ದಿನಗಳಿಂದ ಉಂಟಾಗುತ್ತಿರುವ ವಾಹನ ದಟ್ಟನೆಗೆ ಕಾರಣವಾಗಿರುವ ಹೆದ್ದಾರಿ ಗುಂಡಿಗಳನ್ನು ತಕ್ಷಣ ಮುಚ್ಚಿ ಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿ ಮಾರ್ಪಡಿಸಬೇಕೆಂದು ಒತ್ತಾಯಿಸುತ್ತೇವೆ.
ಈ ರಸ್ತೆಯಲ್ಲಿ ಒಂದು ವೇಳೆ ಈ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಸಾರ್ವಜನಿಕ ಹೋರಾಟವನ್ನು ಸಂಘಟಿಸಲಾಗುವುದು ಎಂದು ಡಿವೈಎಫ್‌ಐ ಪಂಜಿಮೊಗರು ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.