ವಿದ್ಯಾರ್ಥಿಗಳಿಗೆ ಅಂಕ ಮಾತ್ರವಲ್ಲ ನಾಯಕತ್ವ ಗುಣಗಳೂ ಅವಶ್ಯಕ: ಶಿವರಾಮ ರಾವ್

ವಿದ್ಯಾರ್ಥಿಗಳಿಗೆ ಅಂಕ ಮಾತ್ರವಲ್ಲ ನಾಯಕತ್ವ ಗುಣಗಳೂ ಅವಶ್ಯಕ: ಶಿವರಾಮ ರಾವ್


ಮಂಗಳೂರು: ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಯುವ ವಿದ್ಯಾರ್ಥಿಗಳಿಗೆ ಅಂಕ ಗಳಿಕೆ ಮಾತ್ರವಲ್ಲ ನಾಯಕತ್ವ ಗುಣಗಳೂ ಅವಶ್ಯಕ ಎಂದು ಹಿರಿಯ ವಕೀಲ ಶಿವರಾಮ ರಾವ್ ಹೇಳಿದರು.

ಮಂಗಳೂರು ಗಾಂಧೀ ನಗರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಿದ್ಯಾರ್ಥಿಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನವು ಜೀವನದ ಮುಖ್ಯ ಬುನಾದಿಯಾಗಿದೆ. ಶಿಕ್ಷಣವು ಕೇವಲ ಪಠ್ಯಪುಸ್ತಕ ಮತ್ತು ಅಂಕಗಳ ಗಳಿಕೆಗೆ ಸೀಮಿತವಾಗಬಾರದು. ಇದರೊಂದಿಗೆ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಯಾಗುತ್ತದೆ. ಇಂತಹ ಸಮಗ್ರ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಆತ್ಮವಿಶ್ವಾಸ ಮತ್ತು ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಬೆಳೆಸುತ್ತದೆ. ಕೇವಲ ಅಂಕಗಳಿಗಿಂತ ಸವಾರ್ಂಗೀಣ ವ್ಯಕ್ತಿತ್ವ ವಿಕಸನವೇ ನಿಜವಾದ ಶಿಕ್ಷಣದ ಮುಖ್ಯ ಉದ್ದೇಶ. ಇದು ಅವರನ್ನು ಸಮಾಜದ ಜವಾಬ್ದಾರಿಯುತ ಹಾಗೂ ಯಶಸ್ವಿ ಪ್ರಜೆಗಳನ್ನಾಗಿ ರೂಪಿಸುತ್ತದೆ ಎಂದರು.

ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅಜಯ ಮಾತನಾಡಿ, ಉತ್ತಮ ಮತ್ತು ಸಾರ್ಥಕ ಜೀವನ ನಡೆಸಲು ಶಿಸ್ತು ಅತ್ಯಂತ ಅಗತ್ಯ. ವಿದ್ಯಾರ್ಥಿ ದೆಸೆಯು ಜೀವನದ ಅಡಿಪಾಯವಿದ್ದಂತೆ. ಈ ವಯಸ್ಸಿನಲ್ಲೇ ಸಮಯಪಾಲನೆ, ಕರ್ತವ್ಯನಿಷ್ಠೆ ಮತ್ತು ಸದಾಚಾರದಂತಹ ಶಿಸ್ತಿನ ಗುಣಗಳನ್ನು ಮೈಗೂಡಿಸಿಕೊಂಡರೆ ಕಲಿಕೆಯಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಶಿಸ್ತುಬದ್ಧ ಜೀವನಶೈಲಿಯು ಕಷ್ಟಪಟ್ಟು ದುಡಿಯುವ ಮನೋಭಾವವನ್ನು ಬೆಳೆಸಿ, ಎಂತಹದೇ ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಅಂದುಕೊಂಡ ಯಶಸ್ಸಿನ ಉನ್ನತ ಗುರಿಯನ್ನು ಸುಲಭವಾಗಿ ತಲುಪಲು ನೆರವಾಗುತ್ತದೆ ಎಂದರು.

ಶ್ರೀ ಗೋಕರ್ಣನಾಥೇಶ್ವರ ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಕಾರಂದೂರು ಅಧ್ಯಕ್ಷತೆ ವಹಿಸಿದ್ದರು.

ಶ್ರೀ ವೆಂಕಟೇಶ ಶಿವ ಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಡಾ. ಬಿ. ಜಿ. ಸುವರ್ಣ, ಶ್ರೀವೆಂಕಟೇಶ ಶಿವ ಭಕ್ತಿ ಯೋಗ ಸಂಘದ ಸದಸ್ಯರಾದ ಜಯರಾಮ್ ಕಾರಂದೂರು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಸಂದೀಪ್ ಖಾರ್ವಿ, ಕಾಲೇಜು ಪ್ರಾಂಶುಪಾಲ ಡಾ. ಜಯಪ್ರಕಾಶ್, ಪಿಯುಸಿ ವಿಭಾಗದ ಪ್ರಾಂಶುಪಾಲರಾದ ರಘುರಾಜ್ ಕದ್ರಿ, ವಿದ್ಯಾರ್ಥಿಸಂಘದ ಅಧ್ಯಕ್ಷ ಶ್ರೇಯಸ್, ಕಾರ್ಯದರ್ಶಿ ರಕ್ಷಿತ್, ಜೊತೆ ಕಾರ್ಯದರ್ಶಿ ಭೂಮಿಕಾ  ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಉಪನ್ಯಾಸಕಿ ಶ್ರುತಿ ಅಮೀನ್ ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸುಮಿತ್ ವಂದಿಸಿದರು.

 

ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳಲ್ಲಿ ಮಾನಸಿಕ ಶಕ್ತಿ, ಒಗ್ಗಟ್ಟು ಮತ್ತು ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒಟ್ಟಾಗಿ ಕಾರ್ಯನಿರ್ವಹಿಸುವುದು ಅವರನ್ನು ಸವಾಲುಗಳನ್ನು ಎದುರಿಸಲು ಸಬಲರನ್ನಾಗಿ ಮಾಡುತ್ತದೆ. ವಿದ್ಯಾರ್ಥಿ ಜೀವನವು ಅತ್ಯಂತ ಜವಾಬ್ದಾರಿಯುತ ಹಂತ. ಇಲ್ಲಿ ಪ್ರತಿಯೊಂದು ನಿರ್ಧಾರದಲ್ಲೂ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಕೆಟ್ಟ ಆಕರ್ಷಣೆಗಳಿಂದ ದೂರವಿದ್ದು, ಶಿಸ್ತು ಹಾಗೂ ಸದುದ್ದೇಶದಿಂದ ಸಾಗಿದರೆ ಮಾತ್ರ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ. -ವಸಂತ ಕಾರಂದೂರು, ಸಂಚಾಲಕರು, ಶ್ರೀ ಗೋಕರ್ಣನಾಥೇಶ್ವರ ವಿದ್ಯಾಸಂಸ್ಥೆ ಮಂಗಳೂರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article