ಮಂಗಳೂರು ರೈಲ್ವೆ ಪುನರ್‌ವ್ಯವಸ್ಥೆಗೆ ರಾಜ್ಯ ಸರ್ಕಾರ ಬೆಂಬಲ ನೀಡಲಿ: ಸಿಎಂಗೆ ಬ್ರಿಜೇಶ್ ಚೌಟ ಮನವಿ

ಮಂಗಳೂರು ರೈಲ್ವೆ ಪುನರ್‌ವ್ಯವಸ್ಥೆಗೆ ರಾಜ್ಯ ಸರ್ಕಾರ ಬೆಂಬಲ ನೀಡಲಿ: ಸಿಎಂಗೆ ಬ್ರಿಜೇಶ್ ಚೌಟ ಮನವಿ

ಮಂಗಳೂರು: ಮಂಗಳೂರು ಸುತ್ತಮುತ್ತಲಿನ ರೈಲ್ವೆ ಅಧಿಕಾರ ವ್ಯಾಪ್ತಿಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಒಳಪಡಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ಅಕ್ಟೋಬರ್ 1ರಿಂದಲೇ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ತನ್ನ ಬೆಂಬಲವನ್ನು ಅಧಿಕೃತವಾಗಿ ತಿಳಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಆ.21ರಂದು ರೈಲ್ವೆ ಮಂಡಳಿ ಹೊರಡಿಸಿರುವ ಅಧಿಸೂಚನೆಯಂತೆ ಅ.1, 2026ರಿಂದ ಮಂಗಳೂರು ರೈಲ್ವೆ ಪ್ರದೇಶವು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಬರಲಿದೆ. ಮೈಸೂರು ಮತ್ತು ಪಾಲಕ್ಕಾಡ್ ವಿಭಾಗಗಳ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಪಡೀಲ್‌ನಿಂದ ಉಳ್ಳಾಲಕ್ಕೆ ಸ್ಥಳಾಂತರವಾಗಲಿದ್ದು, ತೋಕೂರು ಕೊಂಕಣ ರೈಲ್ವೆ ಮತ್ತು ಮೈಸೂರು ವಿಭಾಗಗಳ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಲಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನ ರೈಲ್ವೆ ಜಾಲವು ಹಲವು ವರ್ಷಗಳಿಂದ ವಿವಿಧ ರೈಲ್ವೆ ಆಡಳಿತಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗಿದ್ದರಿಂದ ಕಾಮಗಾರಿ, ಕಾರ್ಯಾಚರಣೆ ಹಾಗೂ ಅಭಿವೃದ್ಧಿ ವಿಚಾರಗಳಲ್ಲಿ ಸಮನ್ವಯದ ಸಮಸ್ಯೆಗಳು ಎದುರಾಗುತ್ತಿದ್ದವು. ಇದೀಗ ಮಂಗಳೂರು ಪ್ರದೇಶವನ್ನು ಒಂದೇ ವಿಭಾಗೀಯ ಆಡಳಿತದಡಿ ತರುವುದರಿಂದ ಕರಾವಳಿ ಟರ್ಮಿನಲ್, ಘಾಟ್ ಪ್ರದೇಶ ಹಾಗೂ ಹಾಸನ-ಮೈಸೂರು ಒಳನಾಡು ರೈಲು ಕಾರಿಡಾರ್‌ಗಳ ಸಮಗ್ರ ಯೋಜನೆಗೆ ಅನುಕೂಲವಾಗಲಿದೆ ಎಂದು ಚೌಟ ಹೇಳಿದ್ದಾರೆ.

ಮಂಗಳೂರು ಕರ್ನಾಟಕದ ಪ್ರಮುಖ ಬಂದರು ನಗರವಾಗಿದ್ದು, ನವ ಮಂಗಳೂರು ಬಂದರು ಮೂಲಕ ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಸರಕು ಸಾಗಣೆ ನಡೆಯುತ್ತಿದೆ. ಹೀಗಾಗಿ ಮಂಗಳೂರು-ಹಾಸನ-ಮೈಸೂರು ರೈಲು ಜಾಲವನ್ನು ಸಮಗ್ರ ಪ್ರಯಾಣಿಕ ಮತ್ತು ಸರಕು ಸಾಗಣೆ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ಈ ಪುನರ್‌ವ್ಯವಸ್ಥೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಹಲವು ವರ್ಷಗಳ ಪ್ರಯತ್ನ:

ಸಂಸದನಾಗಿ ಆಯ್ಕೆಯಾದ ಬಳಿಕ ಮಂಗಳೂರು ರೈಲ್ವೆ ಆಡಳಿತದ ಪುನರ್‌ವ್ಯವಸ್ಥೆಗಾಗಿ ನಿರಂತರವಾಗಿ ಕೇಂದ್ರದ ಗಮನ ಸೆಳೆದಿರುವುದಾಗಿ ಚೌಟ ಹೇಳಿದ್ದಾರೆ. 2024ರ ನವೆಂಬರ್‌ನಲ್ಲಿ ರಾಜ್ಯದ ಸಹೋದ್ಯೋಗಿ ಸಂಸದರೊಂದಿಗೆ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ವಿಷಯ ಪ್ರಸ್ತಾಪಿಸಿದ್ದೆ. 2025ರ ಮಾರ್ಚ್‌ನಲ್ಲಿ ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆಗಳ ಚರ್ಚೆ ಹಾಗೂ ಮಾರ್ಚ್ 26ರಂದು ಲೋಕಸಭೆಯಲ್ಲಿ ಕೇಳಿದ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 4148ರ ಮೂಲಕವೂ ಈ ಬೇಡಿಕೆಯನ್ನು ಮುಂದಿಟ್ಟಿದ್ದೆ ಎಂದು ತಿಳಿಸಿದ್ದಾರೆ.

ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ ಅಧಿಸೂಚನೆ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

ಕೇರಳದ ವಿರೋಧದ ನಡುವೆ ರಾಜ್ಯದ ನಿಲುವು ಅಗತ್ಯ:

ರೈಲ್ವೆ ಮಂಡಳಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇರಳ ಮುಖ್ಯಮಂತ್ರಿ ಪ್ರಧಾನಿಗೆ ಮನವಿ ಮಾಡಿರುವುದು ಹಾಗೂ ಕೇರಳದ ಕೆಲವು ಸಂಸದರು ವಿರೋಧ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಕೇರಳ ತನ್ನ ರಾಜ್ಯದ ಹಿತಾಸಕ್ತಿಗಾಗಿ ತನ್ನ ನಿಲುವನ್ನು ಮಂಡಿಸುವ ಹಕ್ಕು ಹೊಂದಿದೆ. ಆದರೆ ಕರ್ನಾಟಕದ ಹಿತಾಸಕ್ತಿಗೆ ನೇರವಾಗಿ ಸಂಬಂಧಿಸಿದ ಕೇಂದ್ರದ ನಿರ್ಧಾರದ ಕುರಿತು ರಾಜ್ಯ ಸರ್ಕಾರ ಮೌನವಾಗಿರುವುದು ಕರಾವಳಿ ಜನರಿಗೆ ಅರ್ಥವಾಗುತ್ತಿಲ್ಲ ಎಂದು ಚೌಟ ಪತ್ರದಲ್ಲಿ ಹೇಳಿದ್ದಾರೆ.

ಕರ್ನಾಟಕದ ಸರ್ವಪಕ್ಷ ಸಂಸದರ ಸಭೆ ನಡೆಸಿ ರಾಜ್ಯದ ಹಿತಾಸಕ್ತಿಯ ವಿಚಾರಗಳಲ್ಲಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಹಿಂದೆ ಕರೆ ನೀಡಿದ್ದರು. ಅದೇ ತತ್ವವನ್ನು ಈ ವಿಚಾರದಲ್ಲೂ ಅನುಸರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಅ.1ರಿಂದ ಅಧಿಸೂಚನೆಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರದ ಸಂಪೂರ್ಣ ಬೆಂಬಲವನ್ನು ಪ್ರಧಾನಮಂತ್ರಿ ಹಾಗೂ ರೈಲ್ವೆ ಸಚಿವರಿಗೆ ಅಧಿಕೃತವಾಗಿ ತಿಳಿಸುವಂತೆ ಮುಖ್ಯಮಂತ್ರಿ ಮಧ್ಯಸ್ಥಿಕೆ ವಹಿಸಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article