ಜಾಗತಿಕ ಕಂಪನಿಗೆ ರೈತನ ಮಗಳ ಪಾದಾಪ೯ಣೆ: ₹46.33 ಲಕ್ಷದ ಉದ್ಯೋಗ ಪ್ಯಾಕೇಜ್ ಗಿಟ್ಟಿಸಿಕೊಂಡ ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸೃಷ್ಟಿ
10 ವಾರಗಳ ಇಂಟರ್ನ್ಶಿಪ್ ಅವಧಿಯಲ್ಲಿ ₹90,000 ಸ್ಟೈಪೆಂಡ್‌ನೊಂದಿಗೆ ಕಾರ್ಯನಿರ್ವಹಿಸಿದ ಅವರು, ಸಂಸ್ಥೆಯ ವಾತಾವರಣದಲ್ಲಿ ತಮ್ಮ ತಾಂತ್ರಿಕ ಜ್ಞಾನ ಹಾಗೂ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದರು. ಅವರ ಇಂಟರ್ನ್ಶಿಪ್ ಸಾಧನೆಯಿಂದ ಮೆಚ್ಚಿದ ವೀಸಾ ಸಂಸ್ಥೆ, ಬಳಿಕ ಅವರನ್ನು ಸಾಫ್ಟ್ವೇರ್ ಎಂಜಿನಿಯರ್ ಹುದ್ದೆಗೆ ಪೂರ್ಣಾವಧಿ ಉದ್ಯೋಗಕ್ಕೆ ಆಯ್ಕೆ ಮಾಡುವ ಮೂಲಕ ಸೃಷ್ಟಿಯ ವೃತ್ತಿಜೀವನಕ್ಕೆ ವೀಸಾದಲ್ಲಿನ ಇಂಟರ್ನ್ಶಿಪ್ ಮಹತ್ವದ ತಿರುವು ನೀಡಿತು.
ವೀಸಾ ಸಂಸ್ಥೆಯ ಉದ್ಯೋಗ ಕೊಡುಗೆಯಲ್ಲಿ ವೇತನದ ಜತೆಗೆ ಹಲವು ಸೌಲಭ್ಯಗಳನ್ನೂ ಒದಗಿಸಲಾಗಿದೆ. ಕುಟುಂಬಕ್ಕೆ ₹7.50 ಲಕ್ಷ ಮೌಲ್ಯದ ವೈದ್ಯಕೀಯ ವಿಮೆ, ₹25,000ದ ಹೊರರೋಗಿ ಚಿಕಿತ್ಸಾ ಸೌಲಭ್ಯ ಹಾಗೂ ಗರಿಷ್ಠ ₹3 ಲಕ್ಷದವರೆಗೆ ಶಿಕ್ಷಣ ಸಹಾಯಧನ ದೊರೆಯಲಿದೆ. ಇದರೊಂದಿಗೆ ಜಿಮ್ ಸೌಲಭ್ಯ, ಕಚೇರಿ ಸಾರಿಗೆ ಹಾಗೂ ವಾರ್ಷಿಕ ಆರೋಗ್ಯ ತಪಾಸಣೆಯಂತಹ ಹೆಚ್ಚುವರಿ ಸೌಲಭ್ಯಗಳೂ ಲಭ್ಯವಿವೆ.
ಆಳ್ವಾಸ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಟರ್ನ್ಶಿಪ್ ಅವಕಾಶಗಳನ್ನು ಕಲ್ಪಿಸಲು ಹೆಚ್ಚಿನ ಮಹತ್ವ ನೀಡುತ್ತಿದೆ. ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಸೂಕ್ತವಾದ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ದೊರೆಯುವಂತೆ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ವೀಸಾದಲ್ಲಿ ದೊರೆತ ಇಂಟರ್ನ್ಶಿಪ್ ನನಗೆ ಅಮೂಲ್ಯವಾದ ಉದ್ಯಮ ಅನುಭವ ನೀಡಿತು. ಅದೇ ಅವಕಾಶ ನನ್ನ ಕನಸಿನ ಉದ್ಯೋಗ ಪಡೆಯಲು ನೆರವಾಯಿತು ಎಂದು ಸೃಷ್ಟಿ ತಿಳಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸೃಷ್ಟಿಯ ಸಾಧನೆಯನ್ನು ಅಭಿನಂದಿಸಿ, ಆಳ್ವಾಸ್‌ನ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಗ್ರಾಮೀಣ ಹಿನ್ನೆಲೆಯ ರೈತ ಕುಟುಂಬದಿಂದ ಬಂದಿರುವ ಸೃಷ್ಟಿ ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಾರ್ಯಕ್ಷಮತೆಯ ಮೂಲಕ ಜಾಗತಿಕ ಸಂಸ್ಥೆಯಲ್ಲಿ ಅವಕಾಶ ಪಡೆದಿರುವುದು ಗಮನಾರ್ಹ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸೂಕ್ತ ಉದ್ಯಮ ಸಂಪರ್ಕ, ಇಂಟರ್ನ್ಶಿಪ್ ಹಾಗೂ ಪ್ರಾಯೋಗಿಕ ಅನುಭವ ದೊರೆತಾಗ ಅವರ ಪ್ರತಿಭೆಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳು ತೆರೆದುಕೊಳ್ಳುತ್ತವೆ. ಸೃಷ್ಟಿಯ ಸಾಧನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಡಾ. ಎಂ. ಮೋಹನ್ ಆಳ್ವ ಹೇಳಿದರು.
ವಿದ್ಯಾರ್ಥಿನಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ್ಯರು ಹಾಗೂ ಅಧ್ಯಾಪಕ ವೃಂದದವರು ಶ್ಲಾಘಿಸಿದ್ದಾರೆ.
