ಮುಹಮ್ಮದ್ ಪೈಗಂಬರರ ಸಂದೇಶ ಎಲ್ಲಾ ಸಮುದಾಯದವರಿಗೂ ಆದಶ೯: ಪತ್ರಕತ೯ ಪ್ರಸನ್ನ ಹೆಗ್ಡೆ
Wednesday, August 26, 2026
ಮೂಡುಬಿದಿರೆ: ಜಾತಿ ಮತ ಮರೆತು ಪರಸ್ಪರ ಪ್ರೀತಿ, ವಿಶ್ವಾಸ, ಹಾಗೂ ಸಾಮರಸ್ಯದಿಂದ ಬದುಕಬೇಕೆಂಬುದು ಮುಹಮ್ಮದ್ ಪೈಗಂಬರರ ಸಂದೇಶವಾಗಿದೆ. ಈ ಸಂದೇಶ ಎಲ್ಲಾ ಸಮುದಾಯದವರಿಗೂ ಆದರ್ಶವಾಗಿದೆ ಎಂದು ಪತ್ರಕತ೯ ಪ್ರಸನ್ನ ಹೆಗ್ಡೆ ಹೇಳಿದರು.
ಅವರು ಈದ್ ಮಿಲಾದ್ ಪ್ರಯುಕ್ತ ಮರಿಯಾಡಿಯ ಮಸ್ಜಿದುನ್ನೂರು ಜುಮ್ಮಾ ಮಸೀದಿಯಲ್ಲಿ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆ ಹಾಗು ಮಿಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜುಮ್ಮಾ ಮಸೀದಿಯ ಖತೀಬ್ ಉಸ್ತಾದ್ ಜೈನುದ್ದೀನ್ ಮದನಿ ದುವಾ ನೆರವೇರಿಸಿ ಮಾತನಾಡಿ ಪ್ರತಿಯೊಬ್ಬರ ಜಾತಿ, ಧರ್ಮದ ಆಚರಣೆ ಬೇರೆ ಬೇರೆ ಆಗಿರಬಹುದು. ಆದರೆ ನಾವೆಲ್ಲರೂ ಮಾನವ ಧರ್ಮವನ್ನು ಗೌರವಿಸಬೇಕು. ಈದ್ ಮಿಲಾದ್ ಹಬ್ಬವು ಸಹಬಾಳ್ವೆ ಮತ್ತು ಪರಸ್ಪರ ಸಹಕಾರದ ತತ್ವವನ್ನು ಬೋಧಿಸುತ್ತದೆ ಎಂದರು.
ಪುರಸಭೆಯ ಮಾಜಿ ಸದಸ್ಯ ರಾಜೇಶ್ ಕೋಟೆಗಾರ್, ಪ್ರಮುಖರಾದ ಗಂಗಾಧರ ಬಂಗೇರ, ಆನಂದ ಕುಮಾರ್, ಸುರೇಂದ್ರ ಶೆಟ್ಟಿ, ಬಾಲಕೃಷ್ಣ ಬಿ.ಕೆ, ಜಮಾತ್ ನ ಹಿರಿಯರಾದ ಹಾಮ್ಮದ್ ಬಿ.ಕೆ, ಸಿದ್ದಿಕ್ ಬಿಕೆ, ಹಾಗು ಕಿಲ್ಲರ್ ಉಸ್ತಾದ್ ಮತ್ತು ಮಸೀದಿ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ತಸ್ರೀಫ್ ಸ್ವಾಗತಿಸಿದರು. ನಂತರ ಮಕ್ಕಳಿಂದ ಮಿಲಾದ್ ಫೆಸ್ಟ್ ಕಾರ್ಯಕ್ರಮ ನಡೆಯಿತು.