ಮಾದರಿ ಸೋಲಾರ್ ಗ್ರಾಮ: ಅನುದಾನ ಬಳಕೆಗೆ ಪುತ್ತಿಗೆ ಗ್ರಾ.ಪಂ.ನಲ್ಲಿ ಸಭೆ, ಮಾಹಿತಿ ಸಂಗ್ರಹ
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ್ ಬಿ. ಮಾತನಾಡಿ ಪಂಚಾಯತ್ ಗೆ ನಿರಂತರ ಆದಾಯದ ಮೂಲ ಕಲ್ಪಿಸುವ ಉದ್ದೇಶದಿಂದ ಕೇಮಾರು ಹಾಗೂ ಮಜ್ಜಿಗುರಿ ರುದ್ರಭೂಮಿಗೆ ಸೇರಿದ ಸುಮಾರು ಎರಡು ಎಕರೆ ಜಾಗದಲ್ಲಿ ಸೋಲಾರ್ ಗ್ರಿಡ್ ಅಳವಡಿಸಿ ವಿದ್ಯುತ್ ಉತ್ಪಾದಿಸಿ ಮೆಸ್ಕಾಂಗೆ ಪೂರೈಸುವ ಬಗ್ಗೆ, ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಿಗೂ ಸೋಲಾರ್ ವ್ಯವಸ್ಥೆ ಅಳವಡಿಸಿದರೆ ಪಂಚಾಯತ್ ಸ್ವಂತ ಆದಾಯ ಬಲಪಡಿಸುವುದರ ಜತೆಗೆ ವಿದ್ಯುತ್ ವೆಚ್ಚದಲ್ಲಿ ಉಳಿತಾಯವಾಗಲಿದೆ ಎಂದು ತಿಳಿಸಿದ ಅವರು ಸೋಲಾರ್ ಯೋಜನೆಯ ಆದಾಯವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಉದ್ದೇಶವಿದೆ ಎಂದು ಪ್ರಸ್ತಾವನೆ ಮುಂದಿಟ್ಟರು.
ಡಿಸ್ಟ್ರಿಬ್ಯೂಟೆಡ್ ರಿನ್ಯೂವೆಬಲ್ ಎನರ್ಜಿ (ಡಿಆರ್‌ಇ) ಯೋಜನೆಯಡಿ ಮನೆಗಳ ಮೇಲ್ಛಾವಣಿಗೆ ಮಾತ್ರ ಸೀಮಿತವಾಗದೆ, ಗ್ರಾಮದ ಮೂಲಸೌಕರ್ಯ ಹಾಗೂ ಸೌಲಭ್ಯಗಳ ಅಗತ್ಯ ಗುರುತಿಸಿ ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು.
ಊರ್ಜಾ ಡೆವಲಪ್‌ಮೆಂಟ್ ಸೊಲ್ಯೂಷನ್ ಇಂಡಿಯಾ ಪ್ರೈ.ಲಿ.ಯ ಪ್ರಾದೇಶಿಕ ವ್ಯವಸ್ಥಾಪಕ ವರುಣ್ ಜಿ.ಎಂ. ಮಾತನಾಡಿ, ರೈತರು, ಮಹಿಳಾ ಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ವರ್ಗಗಳ ಅಗತ್ಯ ಗುರುತಿಸಿ ಆದ್ಯತಾ ಪಟ್ಟಿ ಸಿದ್ಧಪಡಿಸಲಾಗುವುದು ಎಂದರು.
ಬೀದಿ ದೀಪ, ಕುಡಿಯುವ ನೀರಿನ ಪಂಪ್‌ಗಳಿಗೆ ಸೋಲಾರ್ ವಿದ್ಯುತ್ ಬಳಸುವುದರಿಂದ ವಿದ್ಯುತ್ ಬಿಲ್ ಉಳಿತಾಯವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವಿದ್ಯುತ್ ವ್ಯತ್ಯಯದಿಂದ ನೀರು ಪೂರೈಕೆಗೆ ತೊಂದರೆಯಾಗುವ ವಿಚಾರವೂ ಚರ್ಚೆಯಾಯಿತು.
ಮುಂದಿನ ಹಂತದಲ್ಲಿ ಕಾಮಗಾರಿ, ಸ್ಥಳ ಆಯ್ಕೆ, ವಿದ್ಯುತ್ ಉತ್ಪಾದನೆ ಹಾಗೂ ಆದಾಯ ಬಳಕೆಯ ಸಮಗ್ರ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಯಿತು.
ಊರ್ಜಾ ಡೆವಲಪ್‌ಮೆಂಟ್ ಸೊಲ್ಯೂಷನ್ ಪ್ರತಿನಿಧಿ ಚಂದನ, ಪಂಚಾಯತ್ ಮಾಜಿ ಅಧ್ಯಕ್ಷೆ ರಾಧಾ, ಸದಸ್ಯರಾದ ಮುರಳಿಧರ ಕೋಟ್ಯಾನ್, ವಾಸುದೇವ ನಾಯಕ್ ಹಾಗೂ ಇತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಮಾಜಿ ಜನಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ರೈತರು, ಅಧಿಕಾರಿಗಳು ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.