ಮೂಡುಬಿದಿರೆಯಲ್ಲಿ ಘನ ವಾಹನಗಳ ಸಂಚಾರ, ಟ್ರಾಫಿಕ್ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಕ್ಕೆ ಎಸಿಪಿ ಭರವಸೆ

ಮೂಡುಬಿದಿರೆಯಲ್ಲಿ ಘನ ವಾಹನಗಳ ಸಂಚಾರ, ಟ್ರಾಫಿಕ್ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಕ್ಕೆ ಎಸಿಪಿ ಭರವಸೆ


ಮೂಡುಬಿದಿರೆ: ಬೆಳೆಯುತ್ತಿರುವ ನಗರ ಮೂಡುಬಿದಿರೆ ಪೇಟೆಯಲ್ಲಿ ಸಂಚರಿಸುವ ಘನ ವಾಹನಗಳು, ಬಸ್ ನಿಲ್ದಾಣಗಳಿಗೆ ತೆರಳದ ಬಸ್ಸುಗಳು, ಟ್ರಾಫಿಕ್ ಸಮಸ್ಯೆಯ ಬಗ್ಗೆ  ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ  ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪಣಂಬೂರು ಎಸಿಪಿ ಶ್ರೀಕಾಂತ್ ಭರವಸೆ ನೀಡಿದ್ದಾರೆ. 


ಅವರು ಮೂಡುಬಿದಿರೆ ಫೋರಂ ಬೇಡಿಕೆಯಂತೆ ಗುರುವಾರ ಸಂಜೆ ಪುರಸಭಾ ಕಚೇರಿಯಲ್ಲಿ ನಡೆದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. 


ಮೂಡುಬಿದಿರೆಯು ಬೆಳೆಯುತ್ತಿರುವ ಪೇಟೆಯಾಗಿದ್ದು ಜನಸಂಖ್ಯೆ, ವಾಹನಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿದೆ. ಆದರೆ ಹಳೆಯ ಕಿರಿದಾದ ರಸ್ತೆಗಳಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಟ್ರಾಫಿಕ್ ಪೊಲೀಸ್ ಠಾಣೆ ತೆರೆದರೆ ಸ್ವಲ್ಪ ಮಟ್ಟಿಗೆ ಸಮಸ್ಯೆಯನ್ನು ಬಗೆಹರಿಸಬಹುದು.ಇದೀಗ ತಾತ್ಕಾಲಿಕ ಪರಿಹಾರ ಕೈಗೊಳ್ಳಲಾಗುವುದು ಶಾಶ್ವತ ಪರಿಹಾರ ಕಂಡುಕೊಳ್ಳಲು ವಾರದೊಳಗೆ ತಜ್ಞ ಟ್ರಾಫಿಕ್ ಪೊಲೀಸ್  ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಅವರ ಸಲಹೆಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. 

ಬೃಹತ್ ಅದಿರು ಲಾರಿಗಳ ಸಂಚಾರದಿಂದ ರಸ್ತೆಗಳಿಗೆ ಹಾನಿಯಾಗುತ್ತಿರವ ಬಗ್ಗೆ ದೂರುಗಳು ಬರುತ್ತಿದ್ದು, ಈ ವಾಹನಗಳಿಗೆ ಪರ್ಯಾಯ ರಸ್ತೆಯ ಮೂಲಕ ಸಾಗುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಮೂಡುಬಿದಿರೆಯಲ್ಲಿ ರಿಂಗ್ ರಸ್ತೆಯಿದ್ದರೂ ಕಿರಿದಾದ ತಿರುವುಗಳಿಂದ ಘನವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಿಂಗ್ ರಸ್ತೆಯ ಅಭಿವೃದ್ಧಿಯಾಗಬೇಕು. ಟ್ರಾಫಿಕ್ ರೂಲ್ಸ್ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಮೂಡುಬಿದಿರೆ ಫೋರಂನ ಸಂಚಾಲಕ ಅಕ್ಷಯ ಜೈನ್ ಸಲಹೆ ನೀಡಿ, ಮೂಡುಬಿದಿರೆ ಜನತೆಯ ಪ್ರಮುಖ ಆರು ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಟ್ರಾಫಿಕ್ ಸಮಸ್ಯೆ, ರಸ್ತೆಗಳು ಹದಗೆಟ್ಟಿದ್ದು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಖಾಸಗಿ ಕಟ್ಟಡಗಳ ಪಾರ್ಕಿಂಗ್ ಸ್ಥಳಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದು ಆ ಕಟ್ಟಡಕ್ಕೆ ಬರುವ ಗ್ರಾಹಕರ ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಗಿದೆ. ಅಲ್ಲದೆ ಗ್ರಾಮೀಣ ಪ್ರದೇಶದ ಆಟೋಗಳು ಪೇಟೆಯಲ್ಲಿ ಬಂದು ನಿಲ್ಲುತ್ತಿರುವುದರಿಂದ ಇದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದ್ದು ಇದರ ಬಗ್ಗೆಯೂ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಯೂ ಸಭೆಯಲ್ಲಿ ವ್ಯಕ್ತವಾಯಿತು. 

ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. 

ತಹಸೀಲ್ದಾರ್ ಪುಟ್ಟರಾಜು, ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ತೌಸಿಫ್, ಸಹಾಯಕ ಇಂಜಿನಿಯರ್ ಪ್ರೀತಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್ ಸಾತ್ವಿಕ್, ಪುರಸಭೆಯ ಮಾಜಿ ಸದಸ್ಯರಾದ ಪಿ.ಕೆ. ಧೋಮಸ್, ಪ್ರಸಾದ್ ಕುಮಾರ್, ಪೊಲೀಸ್ ಠಾಣಾ ಉಪನಿರೀಕ್ಷಕಿ ಪ್ರತಿಭಾ ಮತ್ತಿತರರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article