ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ
Friday, August 28, 2026
ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.
ಈ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಧೀರ್ ಅಂಡ್ ವಿಕಾಸ್ ಚಾರ್ಟರ್ಡ್ ಅಕೌಂಟೆಂಟ್ಸ್‌ನ ಮಾಲೀಕ ಸಿಎ ಸುಧೀರ್ ಶಣೈ ಅವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಇವರು ನಮ್ಮ ಪುರಾಣಗಳಲ್ಲಿ ರಕ್ಷಾ ಬಂಧನದ ಕುರಿತಾದ ಸಾಕಷ್ಟು ಕತೆಗಳು ಸಿಗುತ್ತವೆ. ಕೃಷ್ಣ ಮತ್ತು ದ್ರೌಪದಿ ಹಾಗೂ ಲಕ್ಷೀ ದೇವಿ ಹಾಗೂ ಬಲಿ ಚಕ್ರವರ್ತಿ, ಯಮ ಹಾಗೂ ಯಮುನೇ ಹೀಗೆ. ಇಂದು ದೇಶದಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಪರಸ್ಪರ ರಾಕಿ ಕಟ್ಟಿಕೊಂಡು ಆಚರಿಸಲಾಗುತ್ತಿದೆ. ರಕ್ಷೆ ಅಂದರೆ ಕೇವಲ ದಾರ ಕಟ್ಟುವುದು ಅಷ್ಟೆ ಅಲ್ಲ. ಅಣ್ಣನಾದವನು ತಂಗಿಗೆ ರಕ್ಷಣೆ ನೀಡಬೇಕು. ರಕ್ಷೆ ಅಂದರೆ ರಕ್ಷಣೆ. ನಮ್ಮ ದೇಶ, ನಮ್ಮ ಗುರುಗಳು ನಮ್ಮ ತಂದೆ ತಾಯಿಯರು ಯಾವಾಗಲೂ ನಮ್ಮ ಹೃದಯದಲ್ಲಿರಬೇಕು. ಭಾರತದ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು. ತಂದೆ ತಾಯಿಯರು ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರವಹಿಸುತ್ತಾರೆ. ತಂದೆ ತಾಯಿಯರಿಗೆ ನಾವು ಗೌರವವನ್ನು ನೀಡಬೇಕು. ವಿದ್ಯಾರ್ಥಿಗಳೆಲ್ಲರೂ ವಿದ್ಯಾರ್ಜನೆಯನ್ನು ಮಾಡುವ ಮೂಲಕ ಒಳ್ಳೆಯ ಪ್ರಜೆಗಳಾಗಿ ಬಾಳಿ ಎಂದು ಹೇಳುತ್ತಾ ಮಕ್ಕಳಿಗೆ ಶುಭ ಹಾರೈಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಮಕ್ಕಳು ಹಾಗೂ ಶಿಕ್ಷಕರೆಲ್ಲರೂ ಸಾಮೂಹಿಕವಾಗಿ ಒಬ್ಬರು ಮತ್ತೊಬ್ಬರಿಗೆ ರಾಖಿಯನ್ನು ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಸಂಭ್ರಮಿಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಅವರು ಅಧ್ಯಕ್ಷತೆ ವಹಿಸಿದ್ದರು. ವಸತಿ ಶಾಲಾ ಪ್ರಾಂಶುಪಾಲೆ ಸುರೇಖಾ ಆರ್. ಭಟ್ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಸುರೇಖಾ ಆರ್ ಭಟ್ ಅವರು ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು. ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.




.jpg)
