ಸಮಾಜಕ್ಕೆ ಹೊಸ ದಿಕ್ಕು ತೋರಿದ ಯುಗಪುರುಷ ನಾರಾಯಣ ಗುರುಗಳು: ಪವಾಡೆಪ್ಪ ದೊಡ್ಡಮನಿ
ಅವರು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಕರ್ನಾಟಕ ಸರ್ಕಾರ ಮತ್ತು ಮೂಡುಬಿದಿರೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಯ೯ಕ್ರಮದಲ್ಲಿ ಭಾಗವಹಿಸಿ ನಾರಾಯಣ ಗುರುಗಳ ಕುರಿತು ಮಾತನಾಡಿದರು.
ನಾರಾಯಣ ಗುರುಗಳ ಮೂಲ ಪ್ರತಿಪಾದನೆಯಾದ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬುದು ಸಾರ್ವತ್ರಿಕ ಸತ್ಯವಾಗಿದೆ. ವೇದ, ಆಗಮ ಹಾಗೂ ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದ ಅವರು, ದೇವಸ್ಥಾನ ಪ್ರವೇಶ ಸೇರಿದಂತೆ ಎಲ್ಲರಿಗೂ ಸಮಾನ ಹಕ್ಕು ದೊರೆಯಬೇಕು ಎಂದು ಪ್ರತಿಪಾದಿಸಿದ್ದರು ಎಂದರು.
ಕೇರಳ, ಕರ್ನಾಟಕದ ಕರಾವಳಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮೂಲಕ ನಾರಾಯಣ ಗುರುಗಳು ಧಾರ್ಮಿಕ ಜಾಗೃತಿ ಮೂಡಿಸಿದರು. ಹಿಂದುಳಿದ ವರ್ಗಗಳು, ಮಹಿಳೆಯರು ಹಾಗೂ ಶೋಷಿತರ ಉದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅವರ ತತ್ವ-ಆದರ್ಶಗಳನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪವಾಡೆಪ್ಪ ದೊಡ್ಡಮನಿ ಹೇಳಿದರು.
ಗ್ರೇಡ್ 2 ತಹಸೀಲ್ದಾರ್ ಪುಟ್ಟುರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಇಂದು. ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಕರ್ನಾಟಕ ಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸದಸ್ಯ ರಾಜೇಶ್ ಕಡಲಕೆರೆ, ಇರುವೈಲು ಬಿಲ್ಲವ ಸಂಘದ ಅಧ್ಯಕ್ಷ ಇರುವೈಲು ಕುಮಾರ್ ಪೂಜಾರಿ, ಉಪತಹಸೀಲ್ದಾರ್ ರಾಮು ಉಪಸ್ಥಿತರಿದ್ದರು. ಗ್ರಾಮ ಆಡಳಿತಾಧಿಕಾರಿ ಅರ್ಜುನ್ ಸಜ್ಜನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.