ಎಐ ಉತ್ತರ ನೀಡಬಹುದು ಆದರೆ ಚಿಂತನೆಗೆ ಓದು ಬೇಕು: ಡಾ. ರಜತಾ ಶೆಟ್ಟಿ
ಗೂಗಲ್‌ನಲ್ಲಿ ಮಾಹಿತಿ ಹುಡುಕಬಹುದು, ಎಐಯಿಂದ ಉತ್ತರ ಪಡೆಯಬಹುದು. ಆದರೆ ಆ ಮಾಹಿತಿಯ ಅರ್ಥ, ಸಂದರ್ಭ, ಸತ್ಯಾಸತ್ಯತೆ ಹಾಗೂ ಪರಿಣಾಮವನ್ನು ನಿರ್ಣಯಿಸುವ ವಿವೇಚನಾಶಕ್ತಿ ಓದಿನಿಂದಲೇ ರೂಪುಗೊಳ್ಳುತ್ತದೆ. ಓದು ಗಮನ, ಏಕಾಗ್ರತೆ, ಕಲ್ಪನಾಶಕ್ತಿ, ಶಬ್ದಸಂಪತ್ತು ಹಾಗೂ ಸಂವಹನ ಕೌಶಲವನ್ನು ಬೆಳೆಸುವ ಮೂಲಕ ವ್ಯಕ್ತಿಯ ಚಿಂತನಾ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತದೆ.
ಕೃತಕ ಬುದ್ಧಿಮತ್ತೆಯನ್ನು ಶತ್ರುವಾಗಿ ನೋಡಬೇಕಾಗಿಲ್ಲ. ಅದನ್ನು ಕಲಿಕೆಯ ಸಹಭಾಗಿಯಾಗಿ ಬಳಸಬೇಕು. ಎಐಗೆ ಗುಲಾಮರಾಗದೆ, ಅದನ್ನು ಕರಗತ ಮಾಡಿಕೊಳ್ಳಬೇಕು. ಮೊದಲು ಓದಿ, ನಂತರ ಯೋಚಿಸಿ, ನಂತರ ಕೃತಕ ಬುದ್ಧಿಮತ್ತೆಯನ್ನು ವಿವೇಕಯುತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಸ್ವೀಕರಿಸಬೇಕು. ಓದು ಒಂದು ಸ್ಪರ್ಧೆಯಲ್ಲ; ಅದು ಜೀವನ ಶೈಲಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಸವಲತ್ತಿನ ಮೌಲ್ಯವನ್ನು ಅದು ಕಳೆದುಹೋದ ನಂತರ ಅರಿಯುವ ಪರಿಸ್ಥಿತಿ ಬರಬಾರದು. ಸವಲತ್ತು ನಮ್ಮ ಕೈಯಲ್ಲಿರುವಾಗಲೇ ಅದರ ಮೌಲ್ಯ ಅರಿತು, ಕೃತಜ್ಞತೆಯಿಂದ ಸ್ವೀಕರಿಸಿ, ಜವಾಬ್ದಾರಿಯಿಂದ ಬಳಸಿಕೊಂಡು, ಇತರರಿಗೂ ಅದರ ಪ್ರಯೋಜನ ದೊರೆಯುವಂತೆ ಮಾಡುವುದು ನಿಜವಾದ ಪ್ರಜ್ಞೆ. ಜೀವನದಲ್ಲಿ ಯಶಸ್ಸು ಸಾಧಿಸಲು ಅವಕಾಶಗಳನ್ನು ಗುರುತಿಸುವುದಷ್ಟೇ ಸಾಲದು. ಅವುಗಳನ್ನು ಬಳಸಿಕೊಳ್ಳಲು ಅಪಾಯವನ್ನು ಎದುರಿಸುವ ಧೈರ್ಯ, ಕಠಿಣ ಪರಿಶ್ರಮ ಮತ್ತು ನಿರಂತರ ಕಲಿಕೆಯ ಮನೋಭಾವ ಅಗತ್ಯ ಎಂದರು.
ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಳ್ವಾಸ್ ಕಾಲೇಜಿನ ಮುಖ್ಯ ಗ್ರಂಥಪಾಲಕಿ ಶ್ಯಾಮಲತಾ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅನೀಷಾ ಡಿಸೋಜಾ ನಿರೂಪಿಸಿ, ದೀಕ್ಷಿತ್ ಅತಿಥಿಯನ್ನು ಪರಿಚಯಿಸಿ, ಅನ್ಫಲ್ ವಂದಿಸಿದರು.
