ಭಾರತ್ ಜೋಡೋ ಯುವ ಸಂಘಟನೆ ಸ್ಥಾಪನೆಗೆ ಪುರಸಭೆ ಸಿದ್ಧತಾ ಸಭೆ
Tuesday, August 18, 2026
ಮೂಡುಬಿದಿರೆ: ಭಾರತ್ ಜೋಡೋ ಯುವ ಸಂಘಟನೆ ಸ್ಥಾಪನೆಗೆ ಮೂಡುಬಿದಿರೆ ಪುರಸಭೆಯು ಮಂಗಳವಾರ ಸಿದ್ಧತಾ ಸಭೆಯನ್ನು ನಡೆಸಿತು.
ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರು ಭಾರತ್ ಜೋಡೋದ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಮುದಾಯಿಕ ಸಾಮರಸ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್, ನಗರ ಪಂಚಾಯತ್ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಭಾರತ್ ಜೊಡೋ ಸಂಘಟನೆಯನ್ನು ಸ್ಥಾಪಿಸುವ ಉದ್ದೇಶವನ್ನು ಸರಕಾರ ಹೊಂದಿದೆ.
ಪುರಸಭಾ ವ್ಯಾಪ್ತಿಯಲ್ಲಿ 6 ಸಂಘಗಳನ್ನು ಮಾಡಲು ಅವಕಾಶವಿದ್ದು ಒಂದು ಸಂಘದಲ್ಲಿ 100 ಜನರನ್ನು ಒಳಗೊಂಡಿರಬೇಕು. ಪ್ರತಿ ಸಂಘಕ್ಕೆ ತಲಾ ರೂ. 10 ಲಕ್ಷ ಅನುದಾನವನ್ನು ನೀಡಲಾಗುವುದು. ಸಂಘದಲ್ಲಿ 16ರಿಂದ 35 ವಷ೯ದೊಳಗಿನ ಯುವ ಸಮುದಾಯವನ್ನು ಹೊಂದಿರಬೇಕು. ಇದಕ್ಕೆ ಆಧಾರ್ ಕಡ್ಡಾಯವಾಗಿದೆ ಎಂದರು.
ಸಂಘಗಳನ್ನು ಮಾಡಲು ಆ.30 ಅಂತಿಮ ದಿನವಾಗಿದ್ದು ಆದ್ದರಿಂದ ಎಲ್ಲಾ ವಾಡ್೯ನ ಸದಸ್ಯರು ಇದಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಮುಖ್ಯಾಧಿಕಾರಿಯವರು ಮನವಿ ಮಾಡಿದರು.
ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಾಜಿ ಸದಸ್ಯರುಗಳಾದ ಪಿ.ಕೆ. ಥೋಮಸ್, ಕೊರಗಪ್ಪ, ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಪುರಂದರ ದೇವಾಡಿಗ, ದಿನೇಶ್ ಪೂಜಾರಿ ಹಾಗೂ ನಾಮನಿದೇ೯ಶಿತ ಸದಸ್ಯ ವರುಣ್ ಉಪಸ್ಥಿತರಿದ್ದರು.

