ಎಸ್.ಸಿ, ಎಸ್-ಟಿ ಕುಂದು ಕೊರತೆ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯವರು ಭಾಗವಹಿಸಿದ್ದರು: ಜೈ ಭೀಮ್ ಯುವಸೇನೆ ಸ್ಪಷ್ಟನೆ
ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವಸೇನೆಯ ರಾಜ್ಯಾಧ್ಯಕ್ಷ, ಸಂಸ್ಥಾಪಕ ವರ್ತೂರ್ ಮಂಜುನಾಥ್ ಅವರು ಶನಿವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಠನೆ ನೀಡಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಬದಲಾಗಿ ಕಛೇರಿಯ ಇನ್ನೊವ೯ ಸಿಬಂದಿ ಸಭೆಯಲ್ಲಿ ಭಾಗವಹಿಸಿದ್ದರು. ಇತರ ಕೆಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒಗಳು, ಆರ್‌ಐ, ವಿಎ ಮತ್ತಿತರ ಅಧಿಕಾರಿಗಳು ಗೈರು ಹಾಜರಾಗಿರುವುದು ನಿಜ. ಆದರೆ ಇತರ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲೇ ಚರ್ಚಿಸಿ ಪರಿಹರಿಸಿಕೊಳ್ಳುವ ಅವಕಾಶವಿತ್ತು ಆದರೆ ನಾಲ್ಕೈದು ಮಂದಿಯಿದ್ದ ತಂಡವೊಂದು ಅಧಿಕಾರಿಗಳಿಗೆ ಗೌರವ ನೀಡದೆ ಏರು ಧ್ವನಿಯಲ್ಲಿ ಮಾತನಾಡಿ ಸಭೆ ನಡೆಸದಂತೆ ತಿಳಿಸಿತ್ತು. ಅಧಿಕಾರಿ ಯಾರೇ ಆಗಿದ್ದರೂ ಅವರ ಸ್ಥಾನಮಾನಕ್ಕೆ ಗೌರವ ನೀಡಿ, ಕಾನೂನುಬದ್ಧವಾಗಿ ಹಾಗೂ ಗೌರವಯುತವಾಗಿ ಸಮಸ್ಯೆಗಳನ್ನು ಮಂಡಿಸಬೇಕು. ಸಭೆಯ ಅಧ್ಯಕ್ಷರಾಗಿದ್ದ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳುವ ಪ್ರಯತ್ನ ನಡೆದಿಲ್ಲ ಎಂದು ವರ್ತೂರ್ ಮಂಜುನಾಥ್ ತಿಳಿಸಿದರು.
ಎಸ್‌ಸಿ ಸಮುದಾಯದಲ್ಲಿ ಹೆಚ್ಚಿನವರು ಕೂಲಿ ಕೆಲಸ ಮಾಡುತ್ತಿದ್ದು, ಉನ್ನತ ಹುದ್ದೆಯಲ್ಲಿರುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹಲವು ತಿಂಗಳುಗಳಿಂದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಸಭೆಯನ್ನು ಸದುಪಯೋಗಪಡಿಸಿಕೊಳ್ಳಲು ಸಮಿತಿಯಿಂದ ಸುಮಾರು ಏಳು ಮಂದಿ ಹಾಜರಾಗಿದ್ದರು ಎಂದು ಹೇಳಿದರು.
ಸಭೆಯಲ್ಲಿ ಸುಮಾರು 25ರಿಂದ 30 ಮಂದಿ ಇದ್ದರು. ಕೆಲವರು ಸಭೆಯಿಂದ ಹೊರಗೆ ತೆರಳಿದ ಬಳಿಕವೂ ಸಮಸ್ಯೆಗಳ ಕುರಿತು ಚರ್ಚೆ ಮುಂದುವರಿಯಿತು. ತಹಶೀಲ್ದಾರ್ ಅವರು ಹಲವು ವಿಚಾರಗಳಿಗೆ ಸ್ಪಂದಿಸಿ, ಮುಂದಿನ ಸಭೆಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಂಜುನಾಥ್ ಹೇಳಿದರು.
ಡಿಸಿ ಮನ್ನಾ ಜಾಗ, ಪೌತಿ ಖಾತೆ ಹಾಗೂ ಎಸ್‌ಸಿ ಸಮುದಾಯದ ಪೂರ್ವಿಕರ ಹೆಸರಿನಲ್ಲಿರುವ ಜಾಗಗಳ ಸಮಸ್ಯೆಯನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಪೂರ್ವಿಕರ ಹೆಸರಿನಲ್ಲಿರುವ ಹೆಚ್ಚಿನ ಜಾಗಗಳನ್ನು ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಅನುಭವಿಸುವ ಅವಕಾಶ ಸಿಗದಿರುವ ಬಗ್ಗೆ ಗಮನ ಸೆಳೆಯಲಾಗಿದೆ. ಈ ವಿಚಾರದಲ್ಲಿ ಆಂದೋಲನ ನಡೆಸುವ ಮೂಲಕ ಆರ್ಥಿಕವಾಗಿ ಬೆಳೆಯಲು ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಟ್ರಾಫಿಕ್ ಸಮಸ್ಯೆಯ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಈ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆಯೋಜಿಸಲಾಗಿದೆ ಎಂದು ವರ್ತೂರ್ ಮಂಜುನಾಥ್ ಹೇಳಿದರು.
ಎಸ್‌ಸಿ-ಎಸ್‌ಟಿ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಬೇಕು ಎಂದು ಸಮಿತಿ ಒತ್ತಾಯಿಸಿದೆ. ಅಲ್ಲದೆ, ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಿಂಗಳಿಗೆ ಒಂದು ದಿನಾಂಕ ನಿಗದಿಪಡಿಸಿ ಎಸ್‌ಸಿ-ಎಸ್‌ಟಿ ಸಮಸ್ಯೆಗಳ ಕುರಿತು ಸಭೆ ನಡೆಸಿದರೆ, ಸ್ಥಳೀಯವಾಗಿಯೇ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು. ಪೊಲೀಸ್ ಠಾಣೆಗಳಲ್ಲಿ ಮೂರನೇ ವಾರದಲ್ಲಿ ಎಸ್‌ಸಿ-ಎಸ್‌ಟಿ ಸಭೆ ನಡೆಯುವ ರೀತಿಯಲ್ಲಿ ಪಂಚಾಯಿತಿಗಳಲ್ಲೂ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಸಭೆಯಲ್ಲಿ ಮಂಡಿಸಿದ ವಿಚಾರಗಳಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಮುಂದಿನ ಸಭೆಯಲ್ಲಿ ಕ್ರಮಗಳ ಪ್ರಗತಿ ತಿಳಿಯಲಿದೆ ಎಂದು ಅವರು ಹೇಳಿದರು. ಸ್ಮಶಾನ ಜಾಗ ಹಾಗೂ ಪೌತಿ ಖಾತೆಗಳ ಸಮಸ್ಯೆಗಳ ಕುರಿತು ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಹಂತದಲ್ಲಿ ಆಂದೋಲನ ನಡೆಸುವ ಬಗ್ಗೆ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.
ಸಂಘಟನೆಯ ಮೂಡುಬಿದಿರೆ ತಾಲೂಕು ಘಟಕದ ಸದಸ್ಯ ರಾಜೇಶ, ಮೂಡುಬಿದಿರೆ ತಾಲೂಕು ಘಟಕದ ಸಹ ಕಾರ್ಯದರ್ಶಿ ಸಂತೋಷ್ ಕುಮಾರ್, ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಧರ್ ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಸದಸ್ಯ ಹಾಗೂ ಮೂಡುಬಿದಿರೆ ತಾಲೂಕು ಘಟಕದ ಸದಸ್ಯ ದಯಾನಂದ್ ಹಾಗೂ ಮೂಡುಬಿದಿರೆ ತಾಲೂಕು ಘಟಕದ ಸದಸ್ಯ ಸುನಿಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.