ಇಂಜಿನಿಯರಿಂಗ್ ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಲಿ: ಡಾ. ಪೂರ್ಣಿಮಾ ಬಾಳಿಗಾ
ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಐಇಟಿ)ಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಸೋಮವಾರ ಎಐಇಟಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಆಗಮನ’ ಇಂಡಕ್ಷನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದ ಮುಂದಿನ ನಾಲ್ಕು ವರ್ಷಗಳು ಕೇವಲ ಪರೀಕ್ಷಾ ಸಿದ್ಧತೆಗೆ ಸೀಮಿತವಾಗದೆ, ಜ್ಞಾನಾರ್ಜನೆ, ಪ್ರಯೋಗಶೀಲತೆ, ಅನುಭವ ಸಂಪಾದನೆ ಹಾಗೂ ಸ್ವ-ಅಭಿವೃದ್ಧಿಗೆ ಪೂರಕವಾಗುವ ಸಾರ್ಥಕ ಅವಧಿಯಾಗಬೇಕು. ವಿದ್ಯಾರ್ಥಿಗಳು ಕುತೂಹಲವನ್ನು ಬೆಳೆಸಿಕೊಂಡು ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಪ್ರಯೋಗಾಲಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು. ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಆರೋಗ್ಯ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಯುವ ಇಂಜಿನಿಯರ್‌ಗಳಿಗೆ ಅಪಾರ ಅವಕಾಶಗಳಿವೆ. ಈ ಕ್ಷೇತ್ರಗಳಿಗೆ ಕೊಡುಗೆ ನೀಡಲು ಅಗತ್ಯವಾದ ಕೌಶಲ್ಯ ಮತ್ತು ಆಲೋಚನೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಸೇನಾ ನೇಮಕಾತಿ ಕಛೇರಿಯ ನಿರ್ದೇಶಕ ಕರ್ನಲ್ ಸೋಮು ಮಹಾರಾಜನ್, ಯಶಸ್ಸಿಗೆ ಶಿಸ್ತು, ನಿರಂತರತೆ ಹಾಗೂ ಕಠಿಣ ಪರಿಶ್ರಮ ಅತ್ಯಗತ್ಯ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಧಿಕಾರಿ ಹುದ್ದೆಗಳನ್ನು ಪಡೆಯುವ ಗುರಿಯನ್ನೂ ಹೊಂದಬೇಕು ಎಂದು ಕರೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಶಿಕ್ಷಣವು ಕೇವಲ ಪ್ರಮಾಣಪತ್ರಗಳನ್ನು ಪಡೆಯುವವರನ್ನಾಗಲಿ ಅಥವಾ ಉದ್ಯೋಗವನ್ನು ಹುಡುಕುವ ಇಂಜಿನಿಯರ್‌ಗಳನ್ನಾಗಲಿ ಸೃಷ್ಟಿಸುವುದಕ್ಕೆ ಸೀಮಿತವಾಗಬಾರದು. ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಬಲ್ಲ ಜವಾಬ್ದಾರಿಯುತ ವ್ಯಕ್ತಿತ್ವವನ್ನು ರೂಪಿಸಬೇಕು. ವಿದ್ಯಾರ್ಥಿಗಳು ತಮ್ಮ ಬೆಳವಣಿಗೆಯ ಹೊಣೆಗಾರಿಕೆಯನ್ನು ತಾವೇ ವಹಿಸಿಕೊಳ್ಳಬೇಕು. ಅಪಾಯಗಳನ್ನು ಎದುರಿಸುವ ಧೈರ್ಯ, ವೈಫಲ್ಯದಿಂದ ಕಲಿಯುವ ಮನೋಭಾವ ಹಾಗೂ ಹೊಸ ಪ್ರಯತ್ನಗಳನ್ನು ಮಾಡುವ ಸಿದ್ಧತೆ ಬೆಳೆಸಿಕೊಳ್ಳಬೇಕು. ಕ್ಯಾಂಪಸ್‌ನಲ್ಲಿರುವ 42 ವಿದ್ಯಾರ್ಥಿ ಕ್ಲಬ್‌ಗಳ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ‍್ಯ ಡಾ. ಪೀಟರ್ ಫೆರ್ನಾಂಡಿಸ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು ಇದ್ದರು.
ವಿದ್ಯಾರ್ಥಿನಿಯರಾದ ಸ್ಟೆಲ್ಲಾ ಸಾಜಿ ಹಾಗೂ ಶಾರ್ವರಿ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಡಾ. ರವಿಕುಮಾರ್ ಸ್ವಾಗತಿಸಿ, ಡಾ ಹರೀಶ್ ಕುಂದರ್ ವಂದಿಸಿದರು.