ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಭೇಟಿ: ಜೈನ ಸಮಾಜದ ಬೇಡಿಕೆ ಈಡೇರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಸುಮಾರು 30 ನಿಮಿಷ ನಡೆದ ಸಭೆಯಲ್ಲಿ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಜೈನ ಧರ್ಮಗುರುಗಳು ಡಿ.ಕೆ. ಶಿವಕುಮಾರ್ ಅವರನ್ನು ಗೌರವಿಸಿ ಆಶೀರ್ವದಿಸಿದರು.
ವರೂರು-ಹುಬ್ಬಳ್ಳಿಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ, ಕೊಲ್ಲಾಪುರದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಹಾಗೂ ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಮರಣಿಕೆಯಾಗಿ ರವಿಶೇಣ ಆಚಾರ್ಯ ರಚಿತ ಹಾಗೂ ಹೋತಪೇಟೆ ಅನುವಾದಿತ ‘ಶ್ರೀ ಜೀವಂಧರ ಕುಮಾರ’ ಕೃತಿ ಸೇರಿದಂತೆ ಶಾಸ್ತ್ರಸ್ವಾಧ್ಯಾಯಕ್ಕೆ ಗ್ರಂಥಗಳನ್ನು ನೀಡಲಾಯಿತು. ಡಿ.ಕೆ. ಶಿವಕುಮಾರ್ ಅವರ ಆಡಳಿತಾವಧಿಯಲ್ಲಿ ನಾಡಿನ ಸರ್ವರಿಗೂ ಒಳಿತಾಗಲಿ ಹಾಗೂ ರಾಮರಾಜ್ಯ ನಿರ್ಮಾಣವಾಗಲಿ ಎಂದು ಧರ್ಮಗುರುಗಳು ಪ್ರಾರ್ಥಿಸಿದರು.
ಜೈನ ಸಮಾಜದ ಜೈನ ನಿಗಮ ಮಂಡಳಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು. ಬೇಡಿಕೆಗಳ ಪಟ್ಟಿಯನ್ನು ಪರಿಶೀಲಿಸಿ, ವಿಚಾರಿಸಿ ತಿಳಿಸುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಮಾಜಿ ಸಚಿವ ವೀರಕುಮಾರ್ ಪಾಟೀಲ್, ಮಗಡುಮ್, ವಿನೋದ್ ದೊಡ್ಡಣ್ಣವರ, ರಾಜಕೀರ್ತಿ, ಅರುಣ್ ಯಲಗುದ್ರಿ, ಮುನ್ನೊಳ್ಳಿ ವಕೀಲರು, ಆಶಾ ಪ್ರಭು, ಹರ್ಷೇಂದ್ರ ಜೈನ್, ಕರ್ನಾಟಕ ಜೈನ ಅಸೋಸಿಯೇಷನ್ ಪದಾಧಿಕಾರಿಗಳು, ಆಶೀಶ್ ಹಾಗೂ ನೇಹಾ ಜೈನ್ ಉಪಸ್ಥಿತರಿದ್ದರು.