ವಿದ್ಯಾಥಿ೯ಗಳು ಜೀವನವನ್ನು ಕಟ್ಟಿಕೊಳ್ಳಿ; ವ್ಯಸನವನ್ನು ಅಲ್ಲ: ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಕರೆ

ವಿದ್ಯಾಥಿ೯ಗಳು ಜೀವನವನ್ನು ಕಟ್ಟಿಕೊಳ್ಳಿ; ವ್ಯಸನವನ್ನು ಅಲ್ಲ: ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಕರೆ


ಮೂಡುಬಿದಿರೆ: "ವಿದ್ಯಾರ್ಥಿಗಳು ತಮ್ಮ ಸುವರ್ಣ ಭವಿಷ್ಯವನ್ನು ಸತ್ಪ್ರಜೆಗಳಾಗಿ ರೂಪಿಸಿಕೊಳ್ಳಬೇಕೆ ಹೊರತು ದುರಭ್ಯಾಸಗಳಿಗೆ ಬಲಿಯಾಗದೆ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಿ, ವ್ಯಸನವನ್ನಲ್ಲ," ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಹೇಳಿದರು.

ಅವರು ಇಲ್ಲಿನ ಎಕ್ಸಲೆಂಟ್ ಪ. ಪೂ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 'ಡ್ರಗ್ ಅವೇರ್‌ನೆಸ್' (ಮಾದಕ ವಸ್ತು ಜಾಗೃತಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯು ಕೇವಲ ಒಬ್ಬ ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ, ಆತನ ಕುಟುಂಬದ ನೆಮ್ಮದಿ ಮತ್ತು ಇಡೀ ಸಮಾಜದ ಶಾಂತಿಯನ್ನೇ ಕದಡುವ ಗಂಭೀರ ಪಿಡುಗಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

"ಕ್ಷಣಿಕ ಕುತೂಹಲ ಅಥವಾ ಕೆಟ್ಟ ಸ್ನೇಹಿತರ ಸಂಗದಿಂದ ಆರಂಭವಾಗುವ ಸಣ್ಣ ಅಭ್ಯಾಸ, ಇಡೀ ಜೀವನದ ದಿಕ್ಕನ್ನೇ ಹಾಳುಗೆಡವಬಲ್ಲದು. ಶೈಕ್ಷಣಿಕವಾಗಿ ಬೆಳೆಯಲು ನಿಮ್ಮ ಮುಂದೆ ಹತ್ತಾರು ಸನ್ಮಾರ್ಗದ ಆಯ್ಕೆಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಸೂಕ್ತ ಕಾನೂನಿನ ಅರಿವು, ಆತ್ಮಸಂಯಮ ಹಾಗೂ ಉತ್ತಮ ಜೀವನಮೌಲ್ಯಗಳನ್ನು ಮೈಗೂಡಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು," ಎಂದು ರಾಜೇಂದ್ರ ಬಿ. ಯುವಜನತೆಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮುಲ್ಕಿ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ನಾಯಕ್, ಯುವಜನತೆಯನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಜಾಲ ವಿಸ್ತರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಎಚ್ಚರಿಕೆಯ ಮನೋಭಾವ ಬೆಳೆಸಿಕೊಂಡು, ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ನಿರ್ಭಯವಾಗಿ ಮಾಹಿತಿ ನೀಡುವ ಜವಾಬ್ದಾರಿಯುತ ನಾಗರಿಕನಾಗಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್,   ಜೀವ ದೇವರ ಕೊಡುಗೆ; ಜೀವನ ನಮ್ಮ ಸಾಧನೆ. ಜೀವವನ್ನು ಕಾಪಾಡಿ, ಜೀವನವನ್ನು ಸಾರ್ಥಕಗೊಳಿಸಿ. ಜೀವ ಅಮೂಲ್ಯ; ಜೀವನ ಅದಕ್ಕಿಂತಲೂ ಅಮೂಲ್ಯವಾದ ಹೊಣೆಗಾರಿಕೆ. ಶಿಕ್ಷಣದ ನಿಜವಾದ ಉದ್ದೇಶ ಕೇವಲ ಶೈಕ್ಷಣಿಕ ಸಾಧನೆಯಲ್ಲ; ಉತ್ತಮ ವ್ಯಕ್ತಿತ್ವ, ಸಾಮಾಜಿಕ ಬದ್ಧತೆ ಹಾಗೂ ರಾಷ್ಟ್ರಪ್ರಜ್ಞೆಯುಳ್ಳ ಯುವಜನರನ್ನು ರೂಪಿಸುವುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಅವರನ್ನು ಗೌರವಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಕೆರಿಯರ್ ಗೈಡೆನ್ಸ್ ತಜ್ಞ ವಿವೇಕ್ ಭಂಡಾರಿ,  ಹಾಗೂ ಪ್ರಾಂಶುಪಾಲ ಪುಷ್ಪರಾಜ್ ಉಪಸ್ಥಿತರಿದ್ದರು.

ಉಪನ್ಯಾಸಕಿ ಮಂಜುಶ್ರೀ ನಾಯ್ಕ್ ಕಾರ್ಯಕ್ರಮ ನಿರೂಪಿಸಿ,  ಉಪನ್ಯಾಸಕಿ ಪ್ರಿಯಾಂಕ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article